ನವದೆಹಲಿ : ನಾಳೆ ಸಂವಿಧಾನ ದಿನಾಚರಣೆ ನಿಮಿತ್ತ ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭಾ ಸ್ಪೀಕರ್ ಭಾಷಣ ಮಾಡಲಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಓದಲಾಗುತ್ತದೆ. ಈ ವೇಳೆ ರಾಷ್ಟ್ರಪತಿಯವರು ಸಂವಿಧಾನ ಸಭೆಯ ಡಿಬೇಟ್ಗಳ ಡಿಜಿಟಲ್ ಸ್ವರೂಪ, ಈವರೆಗಿನ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನದ ಕ್ಯಾಲಿಯೋಗ್ರಾಫ್ ಕಾಪಿಯನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೇ, ಸಂವಿಧಾನದ ನಿಮಿತ್ತ ಒಂದು ಆನ್ಲೈನ್ ಕ್ವಿಜ್ ಕೂಡ ಆಯೋಜಿಸಲಾಗಿದ್ದು, ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಪ್ರೀಂಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ದಿನಾಚರಣೆಯನ್ನು ನಾಳೆ ಸಂಜೆ 5.30ಕ್ಕೆ ನವದೆಹಲಿಯ ವಿಜ್ಞಾನ ಭವನದ ಪ್ಲೀನರಿ ಹಾಲ್ ನಲ್ಲಿ ಉದ್ಘಾಟಿಸಲಿದ್ದಾರೆ. ಬಳಿಕ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರು, ಸಾಲಿಸಿಟರ್ ಜನರಲ್ ರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ.
1949ರಲ್ಲಿ ಭಾರತದ ಸಂವಿಧಾನವನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿದ ಸ್ಮರಣಾರ್ಥ ರಾಷ್ಟ್ರವು ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.










