ಬ್ಯೂನಸ್ ಐರಿಸ್ : ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಮೆಸ್ಸಿಗೂ ಬೆದರಿಕೆ ಹಾಕಿದ್ದಾರೆ.
ರಾತ್ರೋ ರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸೂಪರ್ ಮಾರ್ಕೆಟ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ‘ಮೆಸ್ಸಿ ನಾವು ನಿಮಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು… ನಿನ್ನನ್ನ ನೋಡಿಕೊಳ್ಳುವುದಿಲ್ಲ’ ಎಂದು ಕೈಬರಹ ಸಂದೇಶವನ್ನು ಬರೆದುಹೋಗಿದ್ದಾರೆ.
ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ. ಅಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇದು ರಾಜಧಾನಿ ಬ್ಯೂನಸ್ ಐರಿಸ್ ನಿಂದ ವಾಯುವ್ಯಕ್ಕೆ 320 ಕಿಮೀ ದೂರದಲ್ಲಿದೆ.
ಗುಂಡಿನ ದಾಳಿಯ ಸಂದರ್ಭದಲ್ಲಿ ಯಾರು ಇರದ ಕಾರಣ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.










