ನಿದ್ರಾಲೋಕದ ನಿಗೂಢಗಳು…!-ಭಾಗ-2

689
firstsuddi

ಡಾ. ಎಂ.ಎಸ್. ಮಣಿ

ನಾನು ಪ್ರೌಢ ಶಾಲೆಯಲ್ಲಿದ್ದಾಗ, ಪಾವಗಡದಲ್ಲಿಯೂ `ತೋಳ ಮಾನವ’ನ ಉಪಟಳ ಹೆಚ್ಚಾಗಿತ್ತು. ಇಲ್ಲಿ ಸಣ್ಣ ಮಕ್ಕಳಿಗಿಂತ, ಹೆಣ್ಣುಮಕ್ಕಳನ್ನು ಹೊತ್ತೊಯ್ದ ಪ್ರಕರಣಗಳು ಹೆಚ್ಚಾಗಿದ್ದವು. ಒಮ್ಮೆ ಪಾವಗಡದಿಂದ 5 ಕಿ.ಮೀ. ದೂರದಲ್ಲಿರುವ ಪಲವಳ್ಳಿಯ ಗ್ರಾಮಸ್ಥೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಹೊಲದಲ್ಲಿ ಕಳೆ ಕೀಳುವ ಆಯುಧ ಹೊಂದಿದ್ದ ಮಹಿಳೆ ಹೋರಾಡಿ ಪಾರಾಗಿದ್ದಾಳೆ. ಆದರೆ, ಜಲತಜ್ಞ ನಾಗಭೂಷಣ ರೆಡ್ಡಿ ಮತ್ತು ಸಮಾಜಸೇವಕ ಆರ್‍ಪಿಎಸ್ ರೆಡ್ಡಿ ಅವರು `ತೋಳ ಮಾನವ’ ಎಂಬುದು ಕಲ್ಪನೆಯ ವಿಷಯ ಎನ್ನುತ್ತಾರೆ. ಕಾಲಿಗೆ ಸ್ಪ್ರಿಂಗ್‍ಗಳನ್ನು ಕಟ್ಟಿಕೊಂಡು ನೆಗೆಯುವ ಮೂಲಕ ಹಳ್ಳಿಗಾಡಿನ ಜನರಲ್ಲಿ ಭೀತಿ ಮೂಡಿಸಿದ್ದರು. ಇವರುಗಳು ಕಳ್ಳರೇ ಹೊರತು ತೋಳ ಅಲ್ಲ ಎಂದು ಕೂಡ ಹೇಳಿದ್ದಾರೆ. ಇಲ್ಲಿ ಸತ್ಯಾಸತ್ಯತೆ ಏನೇ ಇರಲಿ, ಇಂದಿಗೂ ಪಾವಗಡ ಮಾತ್ರವಲ್ಲದೆ ಹಲವು ಭಾಗಗಳಲ್ಲಿ `ತೋಳ ಮಾನವ’ ಎಂದರೆ ಬೆಚ್ಚಿಬೀಳುವ ಸ್ಥಿತಿ ಇದೆ.

ಹಾಗಾದರೆ, ಈ `ತೋಳ ಮಾನವ’ ಯಾರು? ಚಂದ್ರನ ಪ್ರಭಾವದಡಿ ಮನುಷ್ಯ ಪ್ರಾಣಿಯಾಗಿ ಸಂಪೂರ್ಣವಾಗಿ ರೂಪಾಂತರಗೊಳ್ಳುವವನೇ `ತೋಳ ಮಾನವ’ ಎಂಬುದು ಊಹೆಯೇ? ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ, ಬಹುತೇಕ ಮಕ್ಕಳ ಸಾವು ರಾತ್ರಿಯ ವೇಳೆಯಲ್ಲಿಯೇ ಸಂಭವಿಸಿವೆ. ಹಗಲಿನಲ್ಲಿ ಒಂದು ಪ್ರಕರಣವೂ ಸಂಭವಿಸಿರುವುದಿಲ್ಲ. ಇಂತಹ `ತೋಳ ಮಾನವ’ನ ಕಲ್ಪನೆ ಬಂದಿದ್ದು ಪಾವಾಗಡದಿಂದಲ್ಲ, ಸಿಂಧ್‍ನ ಅನುಕಸಾಯಿ ಮೂಲಕವಾಗಿದೆ.

ಅಕ್ಬರ್‍ನ ಆಳ್ವಿಕೆಯಲ್ಲಿ, ಅನುಕಸಾಯಿ ಜನರನ್ನು ಕೊಂದು, ನರಮಾಂಸವನ್ನು ಮಾರಾಟ ಮಾಡಿದನೆಂದು ಕೋಟೆಯ ಗೋಡೆಯಲ್ಲಿಯೇ ಸಮಾಧಿ ಮಾಡಲಾಗಿತ್ತು. ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿ ಸಿ.ಎ. ಕಿನ್‍ಕಾಯಿಡ್ `ಟೇಲ್ಸ್ ಟೋಲ್ಡ್ ಬೈ ದಿ ತುಳಸಿ ಪ್ಲಾಂಟ್’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಇದರಲ್ಲಿ ತನ್ನಿಬ್ಬರು ಯುರೋಪಿಯನ್ ಗೆಳೆಯರು, ಮನುಷ್ಯರು ಇರುಳಲ್ಲಿ ತೋಳವಾಗಿ ಪರಿವರ್ತನೆ ಹೊಂದುವ `ಲಾಕಾನಾಮ್ಹ’ ನೋಡಿದ್ದರೆಂದು ದಾಖಲಿಸಿದ್ದಾರೆ. ಇಂತಹದ್ದೊಂದು `ತೋಳ ಮಾನವ’ ಅವರ ಗೋವಾ ಮೂಲದ ಅಡುಗೆಭಟ್ಟನನ್ನು `ಸೆಹವಾನ್’ ಎಂಬಲ್ಲಿ ಕೊಂದುಹಾಕಿತಂತೆ.

ಇದರಲ್ಲಿ ಪವಾಡ ಏನು ಇಲ್ಲ. ಹಗಲಿನಲ್ಲಿ ಬಹಳವಾಗಿ ಚಿಂತಿಸುವುದರಿಂದ, ರಾತ್ರಿಯ ಹೊತ್ತು ಮೆದುಳು ವಿಶ್ರಾಂತಿ ಇಲ್ಲದೆ, ಇಂತಹ ಕಲ್ಪನೆಗಳನ್ನು ಕಾಣಬಹುದು. ಹಗಲಲ್ಲಿ ಪ್ರಯತ್ನ, ವಿರೋಧಾಭಾಸಗಳೆಲ್ಲದರ ಪರಿಣಾಮ ರಾತ್ರಿಯ ವೇಳೆ ಮನಸ್ಸಿಗೆ ವಿಶ್ರಾಂತಿ ನೀಡಬೇಕು. ಇದು ಮನಸ್ಸನ್ನು ಕ್ರಮವಾಗಿಡಲು ಸಹಕಾರಿಯಾಗುತ್ತದೆ. ಇದೊಂದು ಕ್ರೀಡೆ ಇದ್ದಂತೆಯೇ ಸರಿ. ಮೆದುಳು ಕೋಶ ನಿದ್ರೆಗೆ ಜಾರಿದ ನಂತರ ಏನಾಗುತ್ತದೆ ಗೊತ್ತಿದೆಯೇ? ಅದು ಕನಸನ್ನು ಕಾಣುತ್ತದೆಯೇ? ಇದನ್ನು ಇಲ್ಲವೆನ್ನಲು ಆಗುವುದಿಲ್ಲ. ಊಹಿಸಲು ಆಗುವುದಿಲ್ಲ. ಮೆದುಳು ಕೋಶಗಳು ಸಂಪೂರ್ಣವಾಗಿ ಸ್ವಚ್ಛಗೊಂಡು, ಶುಚಿಯಾದ ನಂತರವಷ್ಟೇ ಎಚ್ಚರಗೊಳ್ಳಬೇಕು. ಒಂದೊಮ್ಮೆ ನಿದ್ರೆಗೆ ಭಂಗವಾದರೆ, ಕ್ರಮಬದ್ಧತೆ ತಪ್ಪಿದರೆ, ಆಂತರಿಕ ಉದ್ವೇಗ ಹೆಚ್ಚಾಗಿ ವ್ಯವಸ್ಥೆಯನ್ನು, ವಿರೋಧಾಭಾಸಗಳನ್ನು, ಕನಸುಗಳನ್ನು ಉಂಟುಮಾಡುತ್ತದೆ. ನಿದ್ರೆ ಎಂಬುದಿಲ್ಲಿ ಉನ್ನತವಾದ ಜಾಗೃತಾವಸ್ಥೆ.

ಹಗಲಿನಲ್ಲಿ ಸುಡುವ ಮೂಲಕ ಸಕಲ ಜೀವರಾಶಿಗಳಿಗೂ ಬೆಳಕು ನೀಡುವುದು ಸೂರ್ಯ. ಸೂರ್ಯನಿಂದ ಬೆಳಕು ಮಾತ್ರವಲ್ಲದೆ, ಜೀವಜಗತ್ತಿನ ಹಲವು ರೋಗಗಳಿಗೆ ಅದರ ಶಾಖದಿಂದ ಔಷಧವನ್ನು ಪಡೆಯುತ್ತಿದ್ದೇವೆ. ದೇಹಕ್ಕೆ ಪ್ರಮುಖವಾಗಿ ಬೇಕಾದ ವಿಟಮಿನ್-ಡಿ ಕೂಡ ಸೂರ್ಯನ ಬಿಸಿಲಿನಿಂದಲೇ ಲಭ್ಯವಾಗುತ್ತದೆ. ಸೂರ್ಯ `ಸಂಜೀವಿನಿ’ ಇದ್ದಂತೆಯೇ ಸರಿ. ಆದರೂ ಇವನ ತಾಪಕ್ಕೆ ಹೆದರಿ, ಬೆದರಿ, ನಿದ್ರೆ ಕಳೆದುಕೊಂಡು ಜೀವ ಬಿಟ್ಟವರು ಇದ್ದಾರೆ.

1930ರಲ್ಲಿ ನವಾಬ್ ಫಯಾಜ್‍ಖಾನ್ ಆಗ್ರಾದ ಮಾನಸಿಕ ಆಶ್ರಯ ಕೇಂದ್ರ ಒಂದಕ್ಕೆ ಭೇಟಿ ಕೊಟ್ಟಿದ್ದು. ಅಲ್ಲಿದ್ದ ಬಂಧಿಗಳನ್ನು ವೀಕ್ಷಿಸುತ್ತಿದ್ದ. ಅವರುಗಳಲ್ಲಿ ಒಬ್ಬನಿಗೆ ಯಾವುದೇ ರೀತಿಯ ಹುಚ್ಚಿನ ಲಕ್ಷಣ ಕಂಡುಬಂದಿರಲಿಲ್ಲ. ಆಗ ಆಸ್ಪತ್ರೆಯ ಅಧೀಕ್ಷಕರ ಬಳಿ ಇವನನ್ನೇಕೆ ಕೂಡಿಹಾಕಿರುವಿರಿ ಎಂದು ಪ್ರಶ್ನಿಸಿದ್ದಾನೆ. ಆಸ್ಪತ್ರೆಯ ಅಧಿಕ್ಷಕರು ಸ್ವಲ್ಪ ತಡೆಯಿರಿ ಎಂದಿದ್ದಾರೆ. ಮಧ್ಯಾಹ್ನ 12 ಘಂಟೆ ಆಗಿದೆ. ಆಗಸದಲ್ಲಿ ಸೂರ್ಯ ಅತ್ಯಂತ ಪ್ರಖರವಾಗಿ ಬೆಳಗಲಾರಂಭಿಸಿದ್ದಾನೆ. ಆಗ ಇದ್ದಕ್ಕಿದ್ದಂತೆ, ಬಂಧಿಯಲ್ಲಿ ಪ್ರಶಾಂತನಾಗಿದ್ದ ಮನುಷ್ಯ ಆವೇಶದಿಂದ ಕೂಗಲಾರಂಭಿಸಿದ್ದಾನೆ. ಭೀತಿಯಿಂದ ಬಾಗಿಲನ್ನು ಬಡಿಯಲಾರಂಭಿಸಿದ್ದಾನೆ. ತಾನು ಮೇಣದ ಬತ್ತಿಯಿಂದ ಮಾಡಲ್ಪಟ್ಟಿರುವೆ, ಬಿಸಿಲಿನ ತಾಪಕ್ಕೆ ಕರಗಿ ಹೋಗುವೆ ಕಾಪಾಡಿ ಎಂದು ಭೀತೀಯಿಂದ ಅರಚಲಾರಂಭಿಸಿದ್ದಾನೆ.

ಹಾಗಾದರೆ, ಚಂದ್ರನಿಂದ ತೊಂದರೆ ಇಲ್ಲವೇ? ಎಂದೆನಿಸಬಹುದು. ತಂಪು ನೀಡುವ ಚಂದ್ರನ ಬಗ್ಗೆಯೂ ಜನರಲ್ಲಿ ಆತಂಕವಿದೆ. ಅನೇಕರು ಚಂದ್ರನ ತಂಪು ಬೆಳಕಿಗೆ ಹೆದರಿ, ನಿದ್ರೆ ಕಾಣದೆ ಯಾತನೆಗೊಳಗಾಗಿದ್ದಾರೆ. ದೇವರಜೀವನಹಳ್ಳಿಯ ಗಲ್ಲಿಯೊಂದರಲ್ಲಿ ಶ್ರೀಮಂತ ವ್ಯಾಪಾರಸ್ಥರೊಬ್ಬರು ಇದ್ದರು. ಇವರ ಕುಟಂಬದ ವ್ಯಕ್ತಿಯೊಬ್ಬರಿಗೆ ಹುಣ್ಣಿಮೆಯ ಮಾರಣಾಂತಿಕ ಭಯ ಇತ್ತು. ಹುಣ್ಣಿಮೆಯಂದು ಚಂದ್ರ ಅತ್ಯಂತ ತಂಪಾಗಿರುತ್ತಾನೆ. ಆಗ ಹೊರಬಂದರೆ, ಪಾಯಸದಂತೆ ಕರಗಿಹೋಗುವನೆಂಬ ಭಯ ಅವನಲ್ಲಿತ್ತು.

ಮೊಘಲ್ ದೊರೆ ಔರಂಗಜೇಬನ ಮರಣಾನಂತರ ಒಂದನೇ ಬಹದ್ದೂರ್ ಷಾ, ಷಾ ಆಲಂ ಹೆಸರಿನಿಂದ ಸಿಂಹಾಸನವನ್ನು ಏರಿದನು. ಇವನೊಬ್ಬ ಮಾನಸಿಕ ರೋಗಿಯಾಗಿದ್ದನು. ಅಲ್ಪಾವಧಿಯ ಆಡಳಿತವನ್ನು ನಡೆಸಿದ್ದನು. ಹುಣ್ಣಿಮೆಯ ದಿನ `ಆತ್ಮಹತ್ಯೆ’ ಮಾಡಿಕೊಳ್ಳಲು ಪ್ರೇರಣೆಯಾಗುತ್ತದೆ ಎಂಬ ಭೀತಿಯಿಂದ ನರಳುತ್ತಿದ್ದನು. ಇದಕ್ಕಾಗಿ ಅರಮನೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಅಂತಃಪುರದ ಕೋಣೆಯೊಂದರ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದನು. ಮಧ್ಯರಾತ್ರಿ ಕಳೆದನಂತರ ತನ್ನ ಹಾಸಿಗೆಗೆ ಮರಳಿ ಮೈಚೆಲ್ಲುತ್ತಿದ್ದನು.

ಎರಡನೇ ಷಾ ಆಲಂನ ಮಗ, ಮೊದಲ ಷಾ ಆಲಂನ ನಂತರ ಅಂದರೆ 50 ವರ್ಷಗಳ ತರುವಾಯ ಅಧಿಕಾರಕ್ಕೆ ಬರುತ್ತಾನೆ. ಇವನು ಹುಣ್ಣಿಮೆಯ ದಿನ ಓಡಿಹೋಗಿ ರಾಜಸ್ನಾನಗೃಹದಲ್ಲಿ ಅವಿತಿಟ್ಟುಕೊಳ್ಳುತ್ತಿದ್ದನು. ಕಾರಣ, ಹುಣ್ಣಿಮೆಯಂದು ಪೂರ್ಣಚಂದ್ರನ ಕಿರಣಗಳು ಇವನನ್ನು ಕೊಲ್ಲಲು ಹುಡುಕುತ್ತಿದ್ದೇವೆಂಬ ಅನಿಸಿಕೆ ಅವನಲ್ಲಿತ್ತು. ಇದೇ ಭೀತಿ ಆತನ ವೃದ್ಧ ಸಹೋದರಿಯಲ್ಲಿಯೂ ಇತ್ತು. ಈಕೆ ಕೂಡ ಹುಣ್ಣಿಮೆಯ ಕೆಂಪುಕೋಟೆಯ ಮುಮ್ತಾಜ್ ಮಹಲ್‍ನಲ್ಲಿ ಅವಿತಿಟ್ಟುಕೊಳ್ಳುತ್ತಿದ್ದಳು. ಇದು ಬಾಯಿಮಾತಿನಲ್ಲಿ ಹರಿದುಬಂದಿರುವ ಕಥೆ.

ನೀವಿಲ್ಲಿ ರಹಸ್ಯವನ್ನು ಕಾಣುವಿರಿ. ನಿದ್ರೆಯಲ್ಲಿ ರಹಸ್ಯವನ್ನು ಶೋಧಿಸುತ್ತೇವೆ. ದೇವರು, ಕಾಲ್ಪನಿಕ ಕಥೆಗಳು, ದೇವತೆಗಳು ಇವೆಲ್ಲವೂ ರಹಸ್ಯವಾಗಿ ಪ್ರವೇಶಿಸಿ ಸಂಪೂರ್ಣವಾಗಿ ಅಸ್ತವ್ಯಸ್ಥಗೊಳಿಸುತ್ತದೆ. ಹೀಗಾಗಿ ರಹಸ್ಯ ಎಂಬುದೊಂದು ಪಲಾಯನವಾದ. ಹಗಲಿನಲ್ಲಿ ಮೆದುಳ ಒಂದು ಆದೇಶವನ್ನು ಪಡೆದರೆ, ಅದು ಸೌಂದರ್ಯ ಮತ್ತು ಭಾವನೆಯುಕ್ತತೆಯಿಂದ ಕೂಡಿರುತ್ತದೆ. ನಿದ್ರೆ ಅಪರೂಪದ ಗುಣವನ್ನು ಹೊಂದಿದೆ. ಇದು ವಿರೋಧಾಭಾಸ, ನಿದ್ರೆ ಮಾಡುವಾಗ ದ್ವಂದ್ವತೆಯನ್ನು ಸಂಪೂರ್ಣವಾಗಿ ಹೊಂದಿರುತ್ತದೆ. ಇದೊಂದು ತರಹ ನೀರಿದ್ದಂತೆ. ನೀವು ಯಾವುದರಲ್ಲಿ ಹಾಕಿದರೂ, ಅದು ನೀರಾಗಿಯೇ ಉಳಿಯುತ್ತದೆ. ಮನಸು ಕೂಡ ಹಾಗೆಯೇ ನಾಶಪಡಿಸಲು ಆಗುವುದಿಲ್ಲ.

ಇಂತಹ ಪ್ರಯತ್ನಪೂರ್ವಕ ನಿದ್ರೆಯಲ್ಲಿ ಮನಸ್ಸು ಅನಿಯಂತ್ರಿತವಾಗಿರುತ್ತದೆ. ಇದು ಮುಗ್ಧತೆಯ ಸ್ಥಿತಿಯಲ್ಲಿರುತ್ತದೆ. ಏನು ತಿಳಿಯದ ಸ್ಥಿತಿಯಲ್ಲಿರುತ್ತದೆ. ಅಂದರೆ ಮನಸನ್ನು ಸುಲಭವಾಗಿ ನೋಯಿಸಬಹುದು. ಆದರೆ, ಮುಗ್ಧತೆಗೆ ನೋವಿನ ಅರಿವಿರುವುದಿಲ್ಲ. ಮನಸು ದರ್ಪಣದ ಪ್ರತಿಬಿಂಬದಂತೆ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ|| ರವಿ ಹೇಳಿದ್ದಾರೆ.

ಇಂಗ್ಲೆಂಡಿನ ಮಾನಸಿಕ ಆಶ್ರಯ ಕೇಂದ್ರದಲ್ಲಿ ತಜ್ಞ ಪ್ರಾಧ್ಯಾಪಕರೊಬ್ಬರು ಬಂಧಿಯಾಗಿರುತ್ತಾರೆ. ಇವರು ಬ್ರಿಟಾನಿಕಾ ಎನ್‍ಸೈಕ್ಲೋಪಿಡಿಯಾಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಈತನ ಅಪಾರವಾದ, ಅಸಾಧಾರಣ ಜ್ಞಾನಕ್ಕೆ ಪ್ರಕಾಶಕರು ಮಾರುಹೋಗುತ್ತಾರೆ. ತಮ್ಮನ್ನು ಖುದ್ದಾಗಿ ಭೇಟಿಮಾಡಲು ಅವಕಾಶ ನೀಡುವಂತೆ ಕೋರುತ್ತಾರೆ. ಇದಕ್ಕೆ ಪ್ರತ್ಯುತ್ತರಿಸಿದ ತಜ್ಞ ಪ್ರಾಧ್ಯಾಪಕ ತನ್ನನ್ನು ಭೇಟಿಯಾಗಲು ಅವಕಾಶವಿಲ್ಲ, ತಾನು ಮಾನಸಿಕ ಆಶ್ರಯ ಕೇಂದ್ರದಲ್ಲಿ ಬಂಧಿಯಾಗಿರುವೆ ಎನ್ನುವರು. ಇದರಿಂದ ವಿಚಲಿತರಾದ ಪ್ರಕಾಶಕರು, ನೇರವಾಗಿ ಆಸ್ಪತ್ರೆಯ ಅಧೀಕ್ಷಕರ ಬಳಿ ವಿಚಾರಿಸುತ್ತಾರೆ. ಯಾವ ಕಾರಣಕ್ಕೆ ತಜ್ಞ ಪ್ರಾಧ್ಯಾಪಕರನ್ನು ಬಂಧಿಸಿಡಲಾಗಿದೆ ಎಂದು ಪ್ರಶ್ನಿಸುವರು.

ಖಂಡಿತವಾಗಿಯೂ ತಜ್ಞ ಪ್ರಾಧ್ಯಾಪಕರು ಬಹಳ ವಿವೇಕವಂತ, ಬುದ್ಧಿವಂತ. ಆದರೆ, ಹುಣ್ಣಿಮೆ ದಿನ ಬಂದಾಗ ವ್ಯಗ್ರರಾಗುವರು. ಎದುರಿಗೆ ಯಾರೇ ಸಿಕ್ಕಲಿ ಥಳಿಸುವರು. ಒಮ್ಮೆ ತಮ್ಮ ಸೊಸೆಯನ್ನು ಥಳಿಸಿದ್ದರು. ಇನ್ನೊಮ್ಮೆ ಅವರ ಪತ್ನಿ ಮತ್ತು ಮಗನನ್ನು ಕೂಡ ಥಳಿಸಿದ್ದರು.

ಇದೆಲ್ಲವೂ ಹುಣ್ಣಿಮೆಯ ದಿನವೇ ಓದಿದ್ದೆಲ್ಲವೂ ನೆನಪಾಯಿತು. ಹುಣ್ಣಿಮೆಯ ಬೆಳಕು ನಿಲ್ಲಿಸಿರುವ ಪ್ರತಿಮೆಗಳ ಮೇಲೆ ಬಿದ್ದು ಸುಂದರವಾಗಿ ಕಾಣುತ್ತದೆ. ಕಟ್ಟಡಗಳು ಕೂಡ ಮನಮೋಹಕವಾಗಿ ಕಾಣುತ್ತದೆ. ಹಾಗೆಯೇ 8 ಶತಮಾನಗಳ ಕಾಲ ದೇಶವಾಳಿದ ಮೊಘಲ್ ದೊರೆಗಳು ಹುಣ್ಣಿಮೆಯ ಬೆಳಕಿಗೆ ಹೆದರಿದ್ದು ವಿಚಿತ್ರವಾಗಿ ಕಾಣಿಸಿತು. ಇವರು ಕೂಡ ಭಯಕ್ಕೆ ಅತೀತರಲ್ಲ ಎಂಬುದನ್ನು ತೋರಿಸಿಕೊಟ್ಟಿತು. ಹೀಗಾಗಿಯೇ ಅಕ್ಬರ್‍ನಿಂದ ಹಿಡಿದು ಬಹದ್ದೂರ್ ಷಾ ಜಫರ್‍ವರೆಗೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನಗಳಂದು ದೋಷ ಕಳೆಯಲು ಸ್ನಾನ ಮಾಡುತ್ತಿದ್ದರು. ಅಲ್ಲದೆ, ದೋಷ ಪರಿಹಾರಕ್ಕೆ ಧಾನ್ಯಗಳಿಂದ ತುಲಾಭಾರವನ್ನು ಮಾಡಿಸಿಕೊಳ್ಳುತ್ತಿದ್ದರು. ನಂತರ ಅವನ್ನು ಬಡಜನರಿಗೆ ಹಂಚುತ್ತಿದ್ದರು. ಪಂಡಿತ ಪಾಠಿರಾಮನ ಹೆಸರಿನಲ್ಲಿ ಗೋಡೆಯ ನಗರದಲ್ಲಿ ಕುಚ್ಚಾ ಎಂದು ಹೆಸರಿಟ್ಟು ಕರೆಯುತ್ತಿದ್ದರು. ಕೆಂಪುಕೋಟೆಯ ದಿವಾನ್ ಇಖಾಸಾದಲ್ಲಿ ಪಾಠಿರಾಮ್ ಸ್ಥಾನ ಹೊಂದಿದ್ದನು. ಅಲ್ಲವನಿಗೆ ರಾಜಯೋಗ್ಯ ಪಲ್ಲಕ್ಕಿಯನ್ನು ನೀಡಲಾಗಿತ್ತು. ಇವನು ರಾಜಪರಿವಾರ ಯಾವುದನ್ನು ಮಾಡಬೇಕು, ಮಾಡಬಾರದೆಂಬುದರ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದ. ಅದರಲ್ಲೂ ಹುಣ್ಣಿಮೆ ಮತ್ತು ಗ್ರಹಣಗಳ ಸಂದರ್ಭದಲ್ಲಿ ರಾಜಪರಿವಾರ ಹೊರ ಹೋಗಬಾರದೆಂದು ಕಟ್ಟಪ್ಪಣೆ ವಿಧಿಸಿದ್ದನ.ು ಮೊಹಮದ್ ಷಾನ ಉತ್ತರಾಧಿಕಾರಿ, ಅಹಮದ್ ಷಾನನ್ನು `ಮಜರ್’ ಎಂಬಲ್ಲಿ ಇರಿದು ಕೊಲ್ಲಲಾಗಿತ್ತು. ಇದು ಕೂಡ ಇರುಳಲ್ಲಿಯೇ ಗೋಚರಿಸಿತ್ತು. ಈತನ ತಾಯಿ ಕುದೀಸ್ ಬೇಗಂಳ ಮೂಢನಂಬಿಕೆಗೆ ಅಹಮದ್ ಷಾ ಬಲಿಯಾಗಿದ್ದ. ಅಲ್ಲದೆ, ಥಟ್ವಾದ ಫಕೀರನನ್ನು ಹಾಲು ಮಾರುವವನ ವೇಷದಲ್ಲಿ ಕಳುಹಿಸಿ ಸಭಾಪತಿ ಹುಸೇನ್ ಆಲಿಯನ್ನು ಕೊಲ್ಲಿಸಿರುತ್ತಾಳೆ. ಇದಕ್ಕಾಗಿ ಕುದೀಸ್ ಬೇಗಂಳನ್ನು ಬಂಧನದಲ್ಲಿಯೂ ಇರಿಸಲಾಗಿತ್ತು. ಇವೆಲ್ಲವೂ ಕುದೀಸ್ ಬೇಗಂಳ ಮೆಚ್ಚಿನ ಹೈದರ್ ಕುಲಿಯಲ್ಲಿ ಅಸೂಯೆಯನ್ನು ಹುಟ್ಟುಹಾಕಿತ್ತು.

ಹೈದರ್‍ಕುಲಿಯ ಮಹಲು ಈಗಲೂ ಚಾಂದಿನಿ ಚೌಕಿನಲ್ಲಿದೆ. ಇಲ್ಲಿ ಸ್ವಲ್ಪವೂ ಚಂದ್ರನ ಬೆಳಕು ಬೀಳುವುದಿಲ್ಲ. ಆ ರೀತಿಯಲ್ಲಿ ಕಟ್ಟಲಾಗಿದೆ. ಕಾರಣ, ಹೈದರ್‍ಕುಲಿ ಓರ್ವ ಕಂದಾಚಾರದ ಮನುಷ್ಯ. ಇವನು ಕೂಡ ಚಂದ್ರನ ಪ್ರಭಾವಕ್ಕೆ ಒಳಗಾಗಿದ್ದನು. ಇಂತಹ ಮೂಢನಂಬಿಕೆಯಿಂದಾಗಿ ಹೈದರ್‍ಕುಲಿ ಕೆಂಪುಕೋಟೆಯ ಫಿರಂಗಿ ದಳದ ಮುಖ್ಯಸ್ಥ ಹುದ್ದೆಯಿಂದ ವಂಚಿತನಾಗುತ್ತಾನೆ.

ಒಟ್ಟಾರೆ, ಮನಸ್ಸು ನಿದ್ರೆಯಲ್ಲಿದ್ದರೂ ಜಾಗೃತವಾಗರುತ್ತದೆ. ಕಾರಣ, ಅದು ಖಾಲಿಯಾಗಿರುತ್ತದೆ. ಅದನ್ನು ಸ್ಪರ್ಷಿಸಬಹುದು. ಚಲಿಸಬಲ್ಲದು ಹಾಗೂ ಏನನ್ನು ಮಾಡಲು ಆಗುವುದಿಲ್ಲವೋ ಅವೆಲ್ಲವನ್ನೂ ಮಾಡುತ್ತದೆ. ಹೀಗಾಗಿ ನಿದ್ರೆ ಬಹಳ ಪ್ರಮುಖವಾದದ್ದು. ಅದೊಂದು ಬಹು ದೊಡ್ಡ ರಹಸ್ಯ. ಒಂದೊಮ್ಮೆ ಕಣ್ಮುಚ್ಚಿ ಕುಳಿತು ಧ್ಯಾನಸ್ಥರಾದರೆ ಅದೊಂದು ಶಿಸ್ತು. ಅನುಸರಣೆಯ ಶಿಸ್ತಲ್ಲ. ಇದೊಂದು ರೀತಿ ಮನಸ್ಸಿನ ಹತ್ತಿಕ್ಕುವಿಕೆ. ವಿಧೇಯತೆಯ ನಿರೀಕ್ಷೆಯನ್ನು ಹೊಂದಿರುತ್ತದೆ. ಬಹಳಷ್ಟು ಗಮನ ಹರಿಸಬೇಕಾಗುತ್ತದೆ. ಇದು ಕ್ರಮಬದ್ಧತೆಯನ್ನು ತಂದುಕೊಡುತ್ತದೆ. ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿರುತ್ತದೆ. ಇಲ್ಲದಿದ್ದರೆ ಬೇರೆಯವರಂತೆ ಇದು ಸಹ ಅರ್ಥವಿಹೀನ.