ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು : ಬಿ.ಸಿ.ನಾಗೇಶ್.

74
firstsuddi

ಮೈಸೂರು : ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಶಾಲೆಗೆ ಬಂದ ಹೆಣ್ಣು ಮಕ್ಕಳನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಅವರಿಗೆ ಯಾವ ಕ್ಲಾಸ್ ಗಳು ನಡೆಯುವುದಿಲ್ಲ. ಅವರು ಬೀದಿಯಲ್ಲಿ ನಿಲ್ಲುವುದು ಬೇಡ ಎಂದು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದರು.

ಇಂದು ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು. ಅವರು ತುಂಬಾ ಮುಗ್ಧತೆ ಇರುವ ಹೆಣ್ಣುಮಕ್ಕಳು. ಹೆಣ್ಣುಮಕ್ಕಳ ಮುಗ್ಧತೆಯನ್ನು ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿನಿಯರಿಗೆ ಶಾಲೆಯ ಒಳಗೆ ಕೊಠಡಿಯಲ್ಲಿ ಕೂರಿಸಿ ಬುದ್ಧಿ ಹೇಳುತ್ತೇವೆ. ಇದು ಧರ್ಮದ ಶಿಕ್ಷಣವಲ್ಲ. ಇದನ್ನ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿಜಾಬ್, ಕೇಸರಿ ಶಾಲು, ಹಸಿರು ಶಾಲು ಯಾವುದನ್ನು ಧರಿಸಿ ಬಂದರು ಅವರಿಗೆ ತರಗತಿ ಇಲ್ಲ. ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಶಾಲಾ ಆವರಣದ ಗೇಟ್ ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕಾರಾರಿಲ್ಲ. ನಾಳೆಯ ನ್ಯಾಯಾಲಯದ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ. ನಿಮಗೆ ಮಸೀದಿ ಒಳಗೆ ಪ್ರವೇಶವಿಲ್ಲ. ಇದರ ವಿರುದ್ಧ ಹೋರಾಟ ಮಾಡಿ. ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಮಾಡಬೇಡಿ. ಕೊಲಾರದಲ್ಲಿ ನಮಾಜ್ ಕೂಡ ಮಾಡಿದ್ದಾರೆ. ಇದಕ್ಕೆಲ್ಲ ಅವಕಾಶ ಇಲ್ಲ ಎಂದರು.