ಚೆನ್ನೈ: ವೇಗವಾಗಿ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಟೀ ಅಂಗಡಿಗೆ ನುಗ್ಗಿದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಪುದುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಮೆಂಟ್ ತುಂಬಿದ ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿತ್ತು. ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕ ನಿದ್ರೆಗೆ ಜಾರಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮೊದಲಿಗೆ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ, ತಿರುಚ್ಚಿ-ರಾಮೇಶ್ವರಂ ಹೆದ್ದಾರಿಯಲ್ಲಿ ಟೀ ಅಂಗಡಿಗೆ ನುಗ್ಗಿದೆ ಎಂದು ತಿಳಿದುಬಂದಿದೆ. ಇತ್ತ ಟೀ ಅಂಗಡಿಯಲ್ಲಿ ಶಬರಿಮಲೆ ಯಾತ್ರಾರ್ಥಿಗಳು ಟೀ ಕುಡಿಯುತ್ತಿದ್ದರು. ಈ ವೇಳೆ ಟ್ರಕ್ ಏಕಾಏಕಿ ನುಗ್ಗಿದೆ. ಅಪಘಾತದಿಂದ ಟೀ ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.
ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.










