ನಿರುದ್ಯೋಗಿಗಳಿಗೆ ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿ ವಂಚಿಸುತ್ತಿದ್ದ ದಂಪತಿ ಬಂಧನ…

47

ಬೆಂಗಳೂರು: ನಿರುದ್ಯೋಗಿಗಳಿಗೆ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ಆರೋಪಿಗಳು. ಈ ಜೋಡಿ, ಕೆಲಸಕ್ಕಾಗಿ ಅಲೆಯುವ ಯುವಕರನ್ನು ಹುಡುಕಿ ಸರ್ಕಾರಿ ನೌಕರಿ ಕೊಡಿಸೋದಾಗಿ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದರು. ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆ. ಅಲ್ಲದೆ ವಿವಿಧ ಇಲಾಖೆಯ ಮುಖ್ಯಸ್ಥರು ಪರಿಚಯ ಇದ್ದಾರೆ. ಖಾಲಿ ಇರುವ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು.

6 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ತದನಂತರ ಕೆಲಸವನ್ನೂ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ ಮೋಸ ಮಾಡಿದ್ದ ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ವಿದ್ಯಾರಣ್ಯಪುರ ಠಾಣೆ ಪೊಲೀಸರ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರಣ್ಯಪುರ ಠಾಣೆಯಲ್ಲೇ ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಿರೋದು ಪತ್ತೆಯಾಗಿದೆ. ನಗರದ ಹಲವು ಠಾಣೆಗಳಲ್ಲೂ ದಂಪತಿ ವಿರುದ್ಧ ಕೇಸ್ ದಾಖಲಾಗಿವೆ.

ಬಂಧಿತರಿಂದ 2 ಲಕ್ಷ ರೂಪಾಯಿ ನಗದು, ವಿವಿಧ ಕಂಪನಿಯ 4 ಮೊಬೈಲ್ ಫೋನ್‌ಗಳು, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್‌ಗಳಿಗೆ ಸೇರಿದ 15 ಕ್ರೆಡಿಟ್/ಡೆಬಿಟ್ ಕಾರ್ಡ್‌, ಚೆಕ್ ಬುಕ್‌ಗಳು, 11 ವಿವಿಧ ಮಾದರಿಯ, ವಿವಿಧ ಕಂಪನಿಯ ಕೈ ಗಡಿಯಾರಗಳು, 2 ನಕಲಿ ಚಿನ್ನದ ಬ್ರಾಸ್‌ಲೆಟ್, 1 ಚೈನು, 2 ಉಂಗುರಗಳು, 2 ಪೆಂಡೆಂಟ್‌ಗಳು ಹಾಗೂ ಬೇರೆ ಬೇರೆ ಕಂಪನಿಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.