ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಭಾರೀ ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಗಳಿಗೆ ನೀರು ನುಗ್ಗಿದರೆ ತಲಾ 25 ಸಾವಿರ ರೂಪಾಯಿ ಹಾಗೂ ನಿನ್ನೆ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಲವಾರು ತಗ್ಗು ಪ್ರದೇಶಗಳಿಂದ ಭಾರೀ ಮಳೆಯಾದಾಗ ಮೇಲುಗಡೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದುಬರುತ್ತದೆ. ಇಲ್ಲಿನ ಭೌಗೋಳಿಕವಾಗಿ ಜಾಗವು ಹಾಗೆಯೇ ಇದೆ. ಒಟ್ಟಾರೆಯಾಗಿ 10ರಿಂದ 15 ಮನೆಗಳಿಗೆ ನೀರು ನುಗ್ಗಿದೆ. ಇನ್ನು ರಾಜಕಾಲುವೆ ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದರಿಂದ ನೀರು ಹೋಗಲು ಅವಕಾಶ ಸಿಗದೆ ಮನೆಗಳಿಗೆ ನೀರು ನುಗ್ಗುತ್ತದೆ. ಇದಕ್ಕೆ ಪರಿಹಾರವೆಂದರೆ ರಾಜಕಾಲುವೆ ನೀರನ್ನು ಹೊರಗಡೆಗೆ ತಿರುಗಿಸಬೇಕು ಎಂದರು.
ಈ ವೇಳೆ ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಹಲವರು ಸಿಎಂಗೆ ಸಾಥ್ ನೀಡಿದರು.










