ನವದೆಹಲಿ: ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ ಎಂ ನರವಣೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಜನರಲ್ ಮನೋಜ್ ಪಾಂಡೆ ಅವರು ನೇಮಕವಾಗಿದ್ದು, ಇಂದು ಅವರು 29 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಜನರಲ್ ಪಾಂಡೆ, ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1962ರ ಮೇ 6ರಂದು ಜನಿಸಿದ ಜನರಲ್ ಮನೋಜ್ ಪಾಂಡೆ ಅವರು, 39 ವರ್ಷಗಳ ಕಾಲ ಮಿಲಿಟರಿ ವೃತ್ತಿಜೀವನದಲ್ಲಿ ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸಾಂಪ್ರದಾಯಿಕ ಮತ್ತು ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಪ್ರತಿಷ್ಠಿತ ಕಮಾಂಡ್ ಮತ್ತು ಸಿಬ್ಬಂದಿ ನಿಯೋಜನೆಗಳನ್ನು ಹೊಂದಿದ್ದರು.
ಮನೋಜ್ ಪಾಂಡೆ ಅವರು ವೆಸ್ಟರ್ನ್ ಥಿಯೇಟರ್ ನಲ್ಲಿ ಇಂಜಿನಿಯರ್ ಬ್ರಿಗೇಡ್, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪದಾತಿದಳ, ಲಡಾಖ್ ಸೆಕ್ಟರ್ ನಲ್ಲಿ ಪರ್ವತ ವಿಭಾಗ ಮತ್ತು ಈಶಾನ್ಯದಲ್ಲಿ ಕಾರ್ಪ್ಸ್ ಅನ್ನು ಕಮಾಂಡ್ ಮಾಡಿ ಅನುಭವ ಹೊಂದಿದ್ದಾರೆ. ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಪೂರ್ವ ಸೇನಾ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು. ಜನರಲ್ ನರವಣೆ ನಿವೃತ್ತರಾದ ನಂತರ ಮನೋಜ್ ಪಾಂಡೆ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ.










