ನವದೆಹಲಿ : ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್ ಐಆರ್ ಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. ಸದ್ಯಕ್ಕೆ ಅವರ ಬಂಧನ ಮಾಡದಂತೆ ಮಹತ್ವದ ಆದೇಶ ಹೊರಡಿಸಿದೆ. ಜೊತೆಗೆ ಮುಂದಿನ ವಿಚಾರಣೆ ಆಗಸ್ಟ್ 10ರಂದು ಮುಂದೂಡಿಕೆ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ನೇತೃತ್ವದ ರಜಾಕಾಲದ ಪೀಠವು ಈ ಆದೇಶ ಹೊರಹಾಕಿದೆ. ನೂಪುರ್ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದು, ಆಕೆಗೆ ಬಂಧನದಿಂದ ತಡೆಯಾಜ್ಞೆ ಹಾಗೂ ರಕ್ಷಣೆ ನೀಡಬೇಕು ಎಂದು ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.
ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಎಫ್ ಐಆರ್ ದೂರು ದಾಖಲಾಗಿದ್ದು, ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು.










