ನೂಪುರ್ ಶರ್ಮಾ ಹತ್ಯೆ ಮಾಡಲು ಭಾರತದ ಗಡಿ ದಾಟಿ ಬಂದಿದ್ದ ಪಾಕ್ ವ್ಯಕ್ತಿಯ ಬಂಧನ…

70
firstsuddi

ನವದೆಹಲಿ : ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವುದಕ್ಕಾಗಿ ಭಾರತದ ಗಡಿ ದಾಟಿ ಬಂದಿದ್ದ ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಶ್ರೀಗಂಗಾ ನಗರ್ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಜುಲೈ 16 ರಂದು ರಾತ್ರಿ 11 ಗಂಟೆ ವೇಳೆಗೆ ಹಿಂದೂಮಲ್ಕೋಟ್ ಗಡಿಯ ಔಟ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ. ಗಸ್ತು ತಂಡಕ್ಕೆ ಈತನ ಚಲನವಲನಗಳು ಅನುಮಾನ ಮೂಡಿಸುವಂತಿದ್ದವು. ತಕ್ಷಣವೇ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈತನನ್ನು ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಉತ್ತರ ಪಂಜಾಬ್ ನ ಮಂಡಿ ಬಹಉದ್ದೀನ್ ನಗರದ ನಿವಾಸಿಯಾಗಿದ್ದಾನೆ. ಈತನಿಂದ 11 ಇಂಚಿನ ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆಗಳು, ಆಹಾರ ಹಾಗೂ ಮರಳಿನ ಚೀಲವನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಈತ, ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವುದಕ್ಕಾಗಿ ಭಾರತಕ್ಕೆ ಬಂದಿದ್ದ, ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ಅಜ್ಮೀರ್ ದರ್ಗಾಗೆ ಭೇಟಿ ನೀಡಲು ಯೋಜನೆ ಹೊಂದಿದ್ದ ಎಂದು ತಿಳಿದುಬಂದಿದೆ.