ಮುಂಬೈ : ಗರ್ಬಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿರುವಾಗ 35 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರೆ, ಮಗ ಸಾವನ್ನಪ್ಪಿದ ಸುದ್ದಿ ಕೇಳಿದ ತಂದೆಯೂ ಕೂಡ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ಮಧ್ಯರಾತ್ರಿ ವಿರಾರ್ ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ನಡೆದ ಗಾರ್ಬಾ ಕಾರ್ಯಕ್ರಮದಲ್ಲಿ ಮನೀಶ್ ನಾರಾಪ್ಜಿ ಸೋನಿಗ್ರಾ ಅವರು ನೃತ್ಯ ಮಾಡುವಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಸೋನಿಗ್ರಾ ಅವರನ್ನು ತಕ್ಷಣವೇ ಅವರ ತಂದೆ ನಾರಾಪ್ಜಿ ಸೋನಿಗ್ರಾ (66) ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ವೈದ್ಯರು ಮಗ ಸಾವನ್ನಪ್ಪಿದ್ದಾರೆ ಎಂದು ಘೋಷಿಸುತ್ತಿದ್ದಂತೆ ತಂದೆ ಕೂಡ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










