ನೆಲ್ಯಾಡಿ : ಹಾಸನದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ ನೆಲ್ಯಾಡಿ ಪೊಲೀಸರು ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು ತಡೆದು 22 ಜಾನುವಾರುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಇಂದು ಮುಂಜಾನೆ ನಡೆದಿದೆ. ತುಮಕೂರು ನಿವಾಸಿ ನವಾಝ್ ಬಂಧಿತ ಆರೋಪಿ. ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಪೊಲೀಸ್ ವಾಹನವನ್ನು ಕಂಡು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ಬೆನ್ನಟಿದ ಪೊಲೀಸರು ಕೋಲ್ಪೆಯಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ 22 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನೆಲ್ಯಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










