ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್‍ಗೆ 9 ಪುಟಗಳ ಉತ್ತರ ನೀಡಿದ ಯತ್ನಾಳ್.

54

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಣ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಯತ್ನಾಳ್‍ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. 72 ಗಂಟೆ ಒಳಗೆ ಉತ್ತರಿಸುವಂತೆ ಖಡ್ ಸೂಚನೆ ನೀಡಿತ್ತು. ಈ ನೋಟಿಸ್‍ಗೆ ಯತ್ನಾಳ್ ಉತ್ತರವನ್ನೇ ನೀಡಿಲ್ಲ, ಅವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಈವರೆಗಿನ ಪ್ರಶ್ನೆಯಾಗಿತ್ತು. ಆದರೆ, ನೋಟಿಸ್ ಪಡೆದ ಮರುದಿನವೇ ಶಿಸ್ತು ಸಮಿತಿಗೆ ಯತ್ನಾಳ್ ಉತ್ತರ ನೀಡಿದ್ದರು ಎಂಬ ವಿಚಾರ ಈಗ ತಿಳಿದುಬಂದಿದೆ. ಕೇಂದ್ರ ಶಿಸ್ತು ಸಮಿತಿ ನೋಟಿಸ್‍ಗೆ ಯತ್ನಾಳ್ ಇ-ಮೇಲ್ ಮೂಲಕ ಒಂಬತ್ತು ಪುಟಗಳ ಉತ್ತರ ನೀಡಿದ್ದಾರೆ. ಇದರೊಂದಿಗೆ, ನೋಟಿಸ್ ದೊರೆತ 72 ಗಂಟೆಗಳ ಒಳಗಾಗಿಯೇ ಅವರು ಉತ್ತರ ನೀಡಿದಂತಾಗಿದೆ.
ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ವಿವರ ಸದ್ಯ ಬಹಿರಂಗವಾಗಿಲ್ಲ. ಆದರೆ, ವಿಜಯೇಂದ್ರ ವಿರುದ್ಧ ದೂರುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ನಾನು ಉಲ್ಲಂಘಿಸಿಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ವಕ್ಫ್ ಕುರಿತ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಬಿ.ವೈ ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಯತ್ನಾಳ್ ಉತ್ತರಿಸಿದ್ದಾರೆ.
ಶಿಸ್ತು ಸಮಿತಿ ನೋಟಿಸ್ ಬಳಿಕ ಯತ್ನಾಳ್ ಬಣ ಮೌನಕ್ಕೆ ಶರಣಾಗಿತ್ತು. ಕಳೆದ ಕೆಲವು ದಿನಗಳಿಂದ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಯತ್ನಾಳ್ ಬಣದ ನಾಯಕ ರಮೇಶ್ ಜಾರಕಿಹೊಳಿ ಕೂಡ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡುವ ತಂತ್ರವನ್ನು ಬಣ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.