ಬೆಂಗಳೂರು: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ಇತರ ನಾಲ್ವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದು, ಈ ನಡುವೆ ತನಿಖೆಯಲ್ಲಿ ಪಕ್ಷಪಾತ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಮೂಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ. ಮೂಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮ ಪತ್ನಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೊಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್’ ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಹೇಳಿದ್ದಾರೆ.
ಒಂದೇ ಒಂದು ದಿನ ನೆಪಮಾತ್ರಕ್ಕೆ ಆರೋಪಿ ಸಿಎಂ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಿರುವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ’. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ‘ನ್ಯಾಯ’ ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡಿ ನ್ಯಾಯದ ಸಮಾಧಿ ಮಾಡಿದೆ ಈ ದುಷ್ಟ ಕಾಂಗ್ರೆಸ್ ಸರ್ಕಾರ. ಕೋರ್ಟಿಗೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿ ಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ, ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಲೋಕಾಯುಕ್ತ ಮುಖ್ಯಮಂತ್ರಿಗಳಿಗೆ ನೀಡಿರುವ ಕ್ಲೀನ್ ಚಿಟ್ ನಿರೀಕ್ಷಿತವೇ ಆಗಿತ್ತು. ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ ಎಂದು ಹೇಳಿದ್ದಾರೆ. ನಾವು ಮೊದಲಿನಿಂದಲೂ ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದ್ದೆವು, ಸಿಬಿಐ ತನಿಖೆಯಿಂದ ಮಾತ್ರ ಸಾವಿರಾರು ನಿವೇಶನಗಳು ಲೂಟಿಯಾಗಿರುವ ಮುಡಾ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯ.
ಸಿದ್ದರಾಮಯ್ಯನವರ 14 ನಿವೇಶನಗಳು, ಲೂಟಿಯಾಗಿರುವ ಸಾವಿರಾರು ನಿವೇಶನಗಳನ್ನು ಹಾಗೂ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಪ್ರಭಾವಿಗಳನ್ನು ರಕ್ಷಿಸುತ್ತಿದೆ. ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಭ್ರಷ್ಟ ಹಗರಣದ ಪಾರದರ್ಶಕ ತನಿಖೆ ನಡೆಯಬೇಕೆಂದರೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರದಿಂದ ಅಂತರ ಕಾಯ್ದುಕೊಂಡ ತನಿಖಾ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂಬುದು ನ್ಯಾಯ ನಿರೀಕ್ಷಿಸುವ ಪ್ರತಿಯೊಬ್ಬರೂ ಒಪ್ಪುವ ಮಾತು. ಈಗಲೂ ಬಿಜೆಪಿ ತನ್ನ ನಿಲುವನ್ನು ಬದಲಿಸುವ ಪ್ರಶ್ನೆಯೇ ಇಲ್ಲ, ಮುಡಾ ಹಗರಣದ ತನಿಖೆ ಸಿಬಿಐನಿಂದ ನಡೆಯಬೇಕೆಂಬುದೇ ನಮ್ಮ ಒತ್ತಾಯವಾಗಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ A1 ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖೆ ಎದುರಿಸಿದ ಪ್ರಥಮ ಪ್ರಕರಣ ಇದಾಗಿದೆ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ದುರದೃಷ್ಟಕರ. ಶುದ್ಧ ವ್ಯಕ್ತಿತ್ವ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ನೈತಿಕವಾಗಿ ಸೋತು ಬಹುದಿನಗಳಾಗಿವೆ, ಭಂಡತನ ಅವರ ಬಂಡವಾಳವಾಗಿದೆ. ಈ ನೆಲದ ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ, ಅಕ್ರಮ, ಭ್ರಷ್ಟಾಚಾರಗಳಿಗೆ ಕುಣಿಕೆ ಬಿಗಿಯುವುದು ಖಚಿತ, ಸತ್ಯ ಗೆಲ್ಲುವುದು ನಿಶ್ಚಿತ ಎಂದು ವಾಗ್ದಾಳಿ ನಡೆಸಿದರು.










