ವಿಜಯಪುರ : ಪಕ್ಷ ಸೂಚಿಸಿದರೆ ಸಚಿವ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ನಗರದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಒಂದು ವೇಳೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನವನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದರೆ ಅದಕ್ಕೆ ನಾನು ಇಂದೇ ಸಿದ್ಧನಿದ್ದೇನೆ. ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಪ್ರಧಾನ ಮಂತ್ರಿಗಳು, ರಾಷ್ಟ್ರೀಯ ಅಧ್ಯಕ್ಷರು ಹೇಗೆ ಹೇಳುತ್ತಾರೋ ಅದರಂತೆಯೇ ನಡೆದುಕೊಳ್ಳುತ್ತೇನೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ. ಪಕ್ಷ ಸೂಚಿಸಿದರೆ ನಾನು ಖಂಡಿತ ಸಚಿವ ಸ್ಥಾನ ತ್ಯಾಗ ಮಾಡುತ್ತೇನೆ ಎಂದರು. ಇದೇ ವೇಳೆ ಉಪಚುನಾವಣೆಯಲ್ಲಿ ಸೋತವರಿಗೆ ಸವಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಯಿಸಿದ ಅವರು, ಸೋತವರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ನನಗೇನು ಗೊತ್ತಿಲ್ಲ. ಗೊತ್ತಿಲ್ಲದೇ ಏನೂ ಹೇಳುವುದು ಸರಿಯಲ್ಲ. ವಿಜಯಪುರ-ಬಾಗಲಕೋಟೆ ಜಿಲ್ಲೆಗಳಿಎ ಸಚಿವ ಸ್ಥಾನ ಸಿಗಲಿ ಎಂಬುವುದು ನನ್ನ ಆಸೆಯೂ ಕೂಡಾ ಹೌದು ಎಂದರು.










