ಬೆಂಗಳೂರು : 10ನೇ ತರಗತಿ ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠವನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯ ಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಿ, ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಲಾಗಿತ್ತು. ಈ ಸಮಿತಿಯು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳು ಹಾಗೂ 1ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ.
ಪ್ರಸ್ತುತ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ‘ಭಗತ್ ಸಿಂಗ್’ ಗದ್ಯವನ್ನು ಕೈಬಿಟ್ಟು ಹೆಡಗೆವಾರ್ ಕುರಿತ ಗದ್ಯ ಸೇರಿಸಲಾಗಿದೆ ಎಂದು ಪ್ರಟಣೆ ಇರುತ್ತದೆ. ವಾಸ್ತವವಾಗಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠವನ್ನು ಕೈಬಿಟ್ಟಿಲ್ಲ. ಸದ್ಯ ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯ ಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.










