ಬೆಂಗಳೂರು : ಪಠ್ಯ ಪುಸ್ತಕಗಳಿಂದ ಟಿಪ್ಪು ಕುರಿತ ಇತಿಹಾಸವನ್ನು ತೆಗೆಯಲು ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಪ್ರೆಸ್ ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಟಿಪ್ಪು ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜನಯಂತಿಯನ್ನು ಆಚರಣೆ ಮಾಡುವುದಿಲ್ಲ. ಅಲ್ಲದೇ ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಕುರಿತಾದ ಇತಿಹಾಸವನ್ನು ತೆಗೆದು ಹಾಕಲು ಚರ್ಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಯಾವುದೇ ವಿಚಾರಗಳು ಪಠ್ಯ ಪುಸ್ತಕಗಳಲ್ಲಿ ಇರಬಾರದು. ಅದಕ್ಕೆ ನಾವು ಅವಕಾಶವನ್ನು ಕೊಡುವುದಿಲ್ಲ. ಈ ಕುರಿತು ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಆರಂಭದಲ್ಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಕೈ ಜೋಡಿಸಿತು. ಕೇಂದ್ರದ ಈ ಯೋಜನೆಯ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿ ನೆರವು ಕೊಡಲಾಗುತ್ತಿದೆ. ಮೀನುಗಾರರ, ನೇಕಾರರ ಸಾಲಮನ್ನಾ ಮಾಡಲಾಗಿದೆ. ದುರಾದೃಷ್ಟವಶಾತ್ ರಾಜ್ಯದಲ್ಲಿ ನೆರೆ, ಅತಿವೃಷ್ಟಿ ಬಂತು. ನೆರೆ ಅತಿವೃಷ್ಟಿ ಎದುರಿಸಲು ಅಧಿಕಾರಿಗಳು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ನೆರೆ, ಬರ ಎರಡನ್ನೂ ರಾಜ್ಯ ಎದುರಿಸುತ್ತಿದೆ. 22 ಜಿಲ್ಲೆಗಳಲ್ಲಿ ನೆರೆ, 5 ಜಿಲ್ಲೆಗಳಲ್ಲಿ ಬರ ಇದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ 1,200 ಕೋಟಿ, ರಾಜ್ಯದಿಂದ 2,969 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಈ ವರೆಗೆ ಪೂರ್ಣ ಹಾನಿಯಾದ 7,481 ಮನೆಗಳಿಗೆ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎಂದು ಹೇಳಿದ್ದು, ಈ ವೇಳೆ ಮೂರು ಜನ ಉಪಮುಖ್ಯಮಂತ್ರಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಮೂರು ಜನ ಉಪಮುಖ್ಯಮಂತ್ರಿಗಳ ಸೃಷ್ಟಿ ಕೇಂದ್ರದ ವರಿಷ್ಟರ ನಿರ್ಧಾರ. ಇದು ಕೇಂದ್ರದ ಸಹಜ ನಿರ್ಧಾರ. ಇದರಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನೂರು ದಿನದಲ್ಲಿ ನಾನು ಯಾವ ರೀತಿ ಆಡಳಿತ ಮಾಡಿದ್ದೇನೆ ಎಂದು ಜನತೆಗೆ ಗೊತ್ತು ಎಂದರು.










