ಪತಿಯೇ ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆ…

90
firstsuddi

ಬೆಂಗಳೂರು : ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

34 ವರ್ಷದ ರೂಪಾ ಕೊಲೆಯಾದ ಮಹಿಳೆ. ಈ ದಂಪತಿಗೆ 9 ವರ್ಷದ ಮಗನಿದ್ದಾನೆ. ಪ್ರತಿನಿತ್ಯ ಪತ್ನಿಯ ಶೀಲ ಶಂಕಿಸಿ ಪತಿ ಕಾಂತರಾಜ್ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಮನಃಸ್ತಾಪ ಉಂಟಾಗುತ್ತಿತ್ತು.

ನಿನ್ನೆ ಸಂಜೆ 4.30ರಲ್ಲಿ ಕಾಂತರಾಜ್ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕಂಡು ಬಂದಿತ್ತು. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಆಕ್ರೋಶಗೊಂಡ ಕಾಂತರಾಜ್ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ರೂಪಾ ಕತ್ತಿಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಟ್ಯೂಷನ್ ಗೆ ಹೋಗಿದ್ದ ಮಗ ಮನೆಗೆ ವಾಪಸ್ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಕಾಂತರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಕಾಂತರಾಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.