ಬೆಂಗಳೂರು: ಮಹಿಳೆಯೊಬ್ಬಳು ತನ್ನ ಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಹುಳಿಮಾವು ಸಮೀಪದ ಕಾಲೇಜಿನಲ್ಲಿ ನಡೆದಿದೆ.
ಉಮೇಶ್ ದಾಮಿ (27) ಕೊಲೆಯಾದ ಪತಿಯಾಗಿದ್ದು, ಈತನನ್ನು ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ. ಈ ದಂಪತಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಉಮೇಶ್, ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಆ ವೇಳೆ ಮನಿಷಾ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತಪಡಿಸಿ ಆಕೆಯ ಜೊತೆಗೆ ಜಗಳವಾಡಿದ್ದಾನೆ.
ಈ ಜಗಳ ವಿಕೋಪಕ್ಕೆ ಹೋದಾಗ ಮನಿಷಾ, ಚಾಕುವಿನಿಂದ ಗಂಡನ ಎದೆಗೆ ಚುಚ್ಚಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಮೇಶ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಆರೋಪಿ ಮನಿಷಾಳನ್ನ ಬಂಧಿಸಿ ಹುಳಿಮಾವು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










