ಮುಂಬೈ: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಪತ್ನಿ ಹಾಗೂ 8 ವರ್ಷದ ಮಗನನ್ನು ಹತ್ಯೆಗೈದು, ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯ ಔಂದ್ ಪ್ರದೇಶದಲ್ಲಿ ನಡೆದಿದೆ. ಸಂದೀಪ್ತೋ ಗಂಗೂಲಿ (44), ಪ್ರಿಯಾಂಕಾ (40) ಹಾಗೂ ತನಿಷ್ಕಾ (8) ಮೃತ ದುರ್ದೈವಿಗಳು.
ಸುದೀಪ್ತೋ ಅವರ ಸಹೋದರ ಬೆಂಗಳೂರಿನಲ್ಲಿ ವಾಸವಿದ್ದಾರೆ, ಅಣ್ಣ ಹಾಗೂ ಅತ್ತಿಗೆ ಇಬ್ಬರೂ ಕರೆ ಸ್ವೀಕರಿಸದ ಕಾರಣ ಸ್ನೇಹಿತರೊಬ್ಬರಿಗೆ ಸುದೀಪ್ತೋ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಸ್ನೇಹಿತರು ಸಂದೀಪ್ತೋ ಮನೆಗೆ ಭೇಟಿ ನೀಡಿದ್ದಾಗ ಫ್ಲ್ಯಾಟ್ ಗೆ ಬೀಗ ಹಾಕಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ತೋ ಸಹೋದರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂದೀಪ್ತೋ ಹಾಗೂ ಆತನ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯ ಮೊಬೈಲ್ ಫೋನ್ ಗಳನ್ನು ಟ್ರ್ಯಾಕ್ ಮಾಡಿದಾಗ ಮೊಬೈಲ್ ಫ್ಲ್ಯಾಟ್ ನಲ್ಲಿ ಇರುವುದು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಕೀ ಬಳಸಿ ಫ್ಲ್ಯಾಟ್ ನೊಳಗೆ ಹೋಗಿದ್ದಾರೆ. ಈ ವೇಳೆ ಸಂದೀಪ್ತೋ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿ ಹಾಗೂ ಮಗುವಿನ ಮುಖಕ್ಕೆ ಪಾಲಿಥಿನ್ ನನ್ನು ಸುತ್ತಿ ಹತ್ಯೆ ಮಾಡಿರುವುದು ಕಂಡುಬಂದಿದೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಗಳು ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೇ ಸುದೀಪ್ತೋ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಫ್ಟ್‌ವೇರ್ ಕಂಪನಿಯ ಉದ್ಯೋಗವನ್ನು ತೊರೆದಿದ್ದರು ಎಂದು ತಿಳಿದುಬಂದಿದೆ. ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.










