ಬೆಂಗಳೂರು : ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಅಸಮಾಧಾನ ಹೊರಹಾಕಿದ್ದು, ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತೀರಿ ಎಂದು ಪ್ರಶ್ನೆ ಮಾಡಿದೆ.
ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಹೈಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು ಕನ್ನಡವನ್ನು ಭಾಷೆಯಾಗಿ ಕಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಹಾಗೆಯೇ, ಭಾಷೆಯನ್ನು ಕಲಿಯುವುದನ್ನ ಪ್ರೋತ್ಸಾಹಿಸಲು ಅವಕಾಶವಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತೀರಿ. ಅಲ್ಲದೇ, ಕನ್ನಡ ಭಾಷೆ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯ ಮಾಡಿಲ್ಲ. ಹಾಗಿದ್ದೂ ಹೊರ ರಾಜ್ಯದವರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸುವುದು ಸರಿಯೇ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಲು ಅವಕಾಶ ಎಲ್ಲಿದೆ ಎಂದು ಪ್ರಶ್ನಿಸಿತು.
ಈ ಕುರಿತು ವಾದ ಮಂಡಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಪೀಠ ನವೆಂಬರ್ 15ಕ್ಕೆ ಮುಂದೂಡಿತು.
ಈ ಹಿಂದೆ ಕೂಡ ಸಿಜೆ ರಿತುರಾಜ್ ಅವಸ್ತಿ ಹಾಗೂ ನ್ಯಾ. ಸಚಿನ್ ಶಂಕರ್ ಮಗದುಮ್ ರವರ ಪೀಠ ಸರ್ಕಾರದ ಕ್ರಮಕ್ಕೆ ಅಸಮಾಧಾನ ಹೊರ ಹಾಕಿ ಇಂತಹ ಆದೇಶಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸೂಕ್ತವಲ್ಲ. ಕನ್ನಡ ಕಲಿಕೆ ಕಡ್ಡಾಯ ನೀತಿಯನ್ನು ಮರುಪರಿಶೀಲಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸಲಹೆ ನೀಡಿತ್ತು.
ಅರ್ಜಿದಾರರ ವಾದವೇನು?
ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 7ರಂದು ಆದೇಶ ಹೊರಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಆಯ್ಕೆ ಆಧರಿತ ಶಿಕ್ಷಣ ಕ್ಕೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಕನ್ನಡ ಕಲಿಕೆ ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿಲ್ಲ. ಹೀಗಿರುವಾಗ ಸರ್ಕಾರದ ಆದೇಶ ಏಕಪಕ್ಷೀಯವಾಗಿದೆ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿದೆ.










