ಬಾಗಲಕೋಟೆ : ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಿಲ್ಲೆಯ ಮಹಾಲಿಂಗಪುರದ ನಿವಾಸಿ ಇಬ್ರಾಹಿಂ ಸುತಾರ ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಲಘು ಹೃದಯಾಘಾತ ಆದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದ ಇಬ್ರಾಹಿಂ ಸುತಾರ್ ಅವರು, ಹಿಂದೂ-ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚಕರಾಗಿದ್ದರು. ಇತ್ತೀಚಿಗೆ ರಾಷ್ಟ್ರದ ಶ್ರೇಷ್ಟ ಪ್ರಶಸ್ತಿ ಯಾಗಿರುವ ಪದ್ಮಶ್ರೀ ಯನ್ನು ರಾಷ್ಟ್ರಪತಿ ಅವರಿಂದ ಪಡೆದುಕೊಂಡಿದ್ದರು.










