ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿನ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ತಲಾ ರೂ. 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ರೂ. 1.70 ಲಕ್ಷ ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಫಲಾನುಭವಿಗೆ ರೂ.5 ಲಕ್ಷ ಅನುದಾನ ನೀಡಲು ಅನುಮತಿ ಕೋರಿ ಮುಖ್ಯಮಂತ್ರಿಯವರಿಗೆ ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ತರಲಾಗುವುದು. ಪಾರದರ್ಶಕತೆ ಇಲ್ಲದೆ ಯಾವುದೇ ಅನುದಾನ ಬಳಕೆಗೂ ಅವಕಾಶ ನೀಡುವುದಿಲ್ಲ ಎಂದರು.










