ಪರಿಷತ್ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶರವಣ.

69
firstsuddi

ಬೆಂಗಳೂರು : ವಿಧಾನ ಪರಿಷತ್ ಗೆ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಟಿ ಎ ಶರವಣ ಅವರು ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಚುನಾವಣಾಧಿಕಾರಿ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ತಿಪ್ಪೇಸ್ವಾಮಿ, ಶಾಸಕ ಆಶ್ವಿನ್ಕುಮಾರ್ ಮತ್ತಿತರ ಮುಖಂಡರು ಹಾಜರಿದ್ದರು. ಇದಕ್ಕೂ ಮುನ್ನ ವಿಧಾನಸೌಧದ ಜೆಡಿಎಸ್ ಕಚೇರಿಯಲ್ಲಿ ಸಭೆ ಸೇರಿ ಶರವಣ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಯಿತು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಟಿ.ಎ. ಶರವಣ ಅವರು, ಪಕ್ಷ ನಿಷ್ಠೆಯನ್ನು ಗಮನಿಸಿ ಎರಡನೇ ಬಾರಿ ವಿಧಾನಪರಿಷತ್ ನಲ್ಲಿ ಸೇವೆ ಸಲ್ಲಿಸಲು ವರಿಷ್ಠರು ಅವಕಾಶ ಕೊಟ್ಟಿದ್ದಾರೆ. ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಹಾಗೂ ಪಕ್ಷದ ಶಾಸಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಸಣ್ಣ ಸಮಾಜದಿಂದ ಬಂದಿದ್ದೇನೆ. ಹಾಗಿದ್ದರೂ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ನನ್ನ ಜವಾಬ್ದಾರಿ ಇನ್ನಷ್ಟು ಜಾಸ್ತಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರಿಗೆ 3ನೇ ಬಾರಿಗೆ ಪಟ್ಟಾಭಿಷೇಕ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.