ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಮಯದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಬೇಕು. ಪಟಾಕಿಯಿಂದ ಆಗುವ ಅವಘಡ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಮತು ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳಿಗೆ ಅವಕಾಶ ನೀಡಬಾರದು. ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸೂಚನೆ ನೀಡಿದರು. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿಗೆ ಮಾತ್ರ ಅವಕಾಶ ಕೊಡಿ. ಪಟಾಕಿಯಿಂದ ಯಾವುದೇ ರೀತಿಯ ಅನಾಹುತ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಅವಕಾಶ ನೀಡಬಾರದು. ಈ ಕುರಿತು ಡಿಸಿಗಳು, ಎಸ್‍ಪಿಗಳಿಗೆ ಸೂಚನೆ ನೀಡಿದ್ದೇನೆ. ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಅಧಿಕಾರಿಗಳು ಪಟಾಕಿ ದಾಸ್ತಾನುಗಳ ಪರಿಶೀಲನೆ ಮಾಡಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಬಾರದು. ನಿಯಮ ಮೀರಿದರೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಸಿರು ಪಟಾಕಿಗಳನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಸಿದ್ದಪಡಿಸಿದೆ. ಈ ಪಟಾಕಿಯಲ್ಲಿ ಲೀಥಿಯಂ, ಅರ್ಸೆನಿಕ್, ಬೇರಿಯಂ ಹಾಗೂ ಸತು ಸೇರಿದಂತೆ ಹಲವು ರೀತಿಯ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಹಸಿರು ಪಟಾಕಿಗಳು ಸಾಮಾನ್ಯ ಪಟಾಕಿಗಿಂತ ಶೇ30 ರಷ್ಟು ಕಡಿಮೆ ವಾಯು ಮಾಲಿನ್ಯ ಮಾಡುತ್ತವೆ. ಹಸಿರು ಪಟಾಕಿ ಹೆಚ್ಚು ಶಬ್ಧ ಮಾಡುವುದಿಲ್ಲ. ಹೊಗೆಯ ಬದಲು ನೀರಿನ ಆವಿ ಬಿಡುಗಡೆ ಮಾಡುತ್ತೆ. ಮತ್ತು ಶಬ್ಧ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಎರಡೂ ಕಡಿಮೆ ಆಗುತ್ತೆ ಹಾಗಾಗಿ ಈ ದೀಪಾವಳಿ ಹಬ್ಬಕ್ಕೆ ರಾಜ್ಯದ ಎಲ್ಲಾ ಜನರು ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು ಎಂದು ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ.










