ಪರೀಕ್ಷೆ ಭಯದಿಂದ ವಿಷ ಸೇವಿಸಿದ್ದ ವಿದ್ಯಾರ್ಥಿನಿ- ಚಿಕಿತ್ಸೆ ಫಲಿಸದೇ ಸಾವು…

54
firstsuddi

ಸುಳ್ಯ: ಪರೀಕ್ಷೆ ಭಯದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಮಾ. 4ರಂದು ಸಾವನ್ನಪ್ಪಿದ್ದಾರೆ.

ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ಸೋಮಸುಂದರ ಅವರ ಪುತ್ರಿ ಆರತಿ (17) ಮೃತ ವಿದ್ಯಾರ್ಥಿನಿ. ಈಕೆ ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಆರತಿ ತನ್ನ ತಂದೆ, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾಳೆ.

ಆರತಿ ಹೆಚ್ಚಾಗಿ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದುದಕ್ಕೆ ಓದಿನ ಕಡೆ ಗಮನ ನೀಡುವಂತೆ ಮನೆಯವರು ಬುದ್ಧಿವಾದ ಹೇಳಿದ್ದರು. ಫೆ. 22ರಂದು ಕಾಲೇಜಿನಿಂದ ಮನೆಗೆ ಬಂದ ಆಕೆ ನನಗೆ ಪರೀಕ್ಷೆಯ ಭಯವಾಗುತ್ತದೆ. ಹಾಗಾಗಿ ನಾನು ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದಳು.

ಕೂಡಲೇ ಮನೆಯವರು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮಾ. 2ರಂದು ಮತ್ತೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರತಿ ಸಾವನ್ನಪ್ಪಿದ್ದಾಳೆ.

ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.