ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತೋಷಖಾನಾ ಕೇಸ್‌ನಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು, ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ತೋಷಖಾನಾ ಭ್ರಷ್ಟಾಚಾರ ಪ್ರಕರಣ ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ ಅವರನ್ನು ಐದು ವರ್ಷಗಳ ಕಾಲ ರಾಜಕೀಯದಿಂದ ಅನರ್ಹಗೊಳಿಸಲಾಗಿದೆ. ಈ ಪ್ರಕರಣದ ಶಿಕ್ಷೆಯು ನವೆಂಬರ್ ಆರಂಭದ ಮೊದಲು ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಖಾನ್ ಭಾಗವಹಿಸುವ ಸಾಧ್ಯತೆಯನ್ನು ಕೊನೆಗೊಳಿಸಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಪಾಕಿಸ್ತಾನದ ರಾಜಕೀಯ ಪಕ್ಷವಾದ ಪಿಟಿಐನ ಅಧ್ಯಕ್ಷರೂ ಆಗಿದ್ದ ಇಮ್ರಾನ್ ಖಾನ್‌ರನ್ನ, ಲಾಹೋರ್‌ನಲ್ಲಿರುವ ಜಮಾನ್ ಪಾರ್ಕ್ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಟ್ವೀಟ್ ಮೂಲಕ ತಿಳಿಸಿದೆ.
ನ್ಯಾಯಾಲಯವು ಪಿಟಿಐ ಮುಖ್ಯಸ್ಥರಿಗೆ 100,000 ಪಿಕೆಆರ್ ದಂಡ ವಿಧಿಸಿದೆ ಎಂದು ಡಾನ್ ವರದಿ ಮಾಡಿದೆ. ತೋಷಖಾನಾ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಅವರ ವಿರುದ್ಧ ಸಲ್ಲಿಸಿದ ಕ್ರಿಮಿನಲ್ ದೂರಿನ ಮೇರೆಗೆ ಖಾನ್ ಅವರನ್ನು ಮೇ 10 ರಂದು ದೋಷಾರೋಪಣೆ ಮಾಡಲಾಯಿತು.
ಇಂದು ನಡೆದ ವಿಚಾರಣೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದಿಲಾವರ್ ಅವರು ಪ್ರಕರಣದಲ್ಲಿ ಮಾಜಿ ಪ್ರಧಾನಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.
ಇಮ್ರಾನ್ ಖಾನ್ ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ನಕಲಿ ವಿವರಗಳನ್ನು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ನ್ಯಾಯಾಧೀಶರನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ನ್ಯಾಯಾಲಯದ ಆದೇಶಗಳ ಅನುಷ್ಠಾನಕ್ಕಾಗಿ ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರಿಗೆ ಆದೇಶದ ಪ್ರತಿಯನ್ನು ಕಳುಹಿಸಬೇಕು ಎಂದು ಎಡಿಎಸ್‌ಜೆ ದಿಲಾವರ್ ನಿರ್ದೇಶಿಸಿದ್ದಾರೆ.










