ತಿರುವನಂತಪುರಂ/ಚೆನ್ನೈ : ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್‍ಐ) ನಿಷೇಧಿಸಿದ ಒಂದು ದಿನದ ನಂತರ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸಹ ಪಿಎಫ್ಐ ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿ ಆದೇಶ ಹೊರಡಿಸಿವೆ.
ಜಾಗತಿಕ ಮಟ್ಟದ ಭಯೋತ್ಪಾದನಾ ಸಂಘಟನೆ ಐಸಿಸ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೋದಿರುವ ಹಾಗೂ ದೇಶದೊಳಗೆ ಕೋಮು ದ್ವೇಷವನ್ನು ಹರಡಲು ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳು ಪ್ರಯತ್ನಿಸಿವೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಆದೇಶದ ಪ್ರತಿಯಲ್ಲಿ ತಿಳಿಸಿದೆ.
ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್‍ಐ ಮತ್ತು ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ಕೇಂದ್ರವು ನಿಷೇಧಿಸಿದೆ.
ಇನ್ನೂ ಪಿಎಫ್ಐ ನಿಷೇಧದ ಬೆನ್ನಲ್ಲೇ ಪಿಎಫ್ಐನ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹಾಗೆಯೇ ಪಿಎಫ್ಐ ಮುಖಂಡರ ಟ್ವಿಟ್ಟರ್ ಖಾತೆಗಳನ್ನು ಕೂಡ ತಡೆಹಿಡಿಯಲಾಗಿದೆ.
ಸುಮಾರು 81,000 ಹಿಂಬಾಲಕರನ್ನು ಹೊಂದಿದ್ದ ಪಿಎಫ್ಐ ಅಫಿಷಿಯಲ್ ಖಾತೆಯನ್ನು ಟ್ವಿಟ್ಟರ್ ಸ್ಥಗಿತಗೊಳಿಸಿದೆ. 50,000ದಷ್ಟು ಹಿಂಬಾಲಕರನ್ನು ಹೊಂದಿದ್ದ ಪಿಎಫ್ಐ ಅಧ್ಯಕ್ಷ ಓಎಂಎ ಸಲಾಂ, 85,000ದಷ್ಟು ಹಿಂಬಾಲಕರನ್ನು ಹೊಂದಿರುವ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಅವರ ಖಾತೆಗಳನ್ನು ಕೂಡ ಟ್ವಿಟ್ಟರ್ ತಡೆಹಿಡಿದಿದೆ.










