ಬೆಂಗಳೂರು : ಮನೆ ಮಾಲೀಕನೊಬ್ಬ ಪಿಸ್ತೂಲ್ ತೋರಿಸಿ ಬಾಡಿಗೆಗಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಮನೆ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಬೆಂಗಳೂರು ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಎಂಬಾತ ಟೈಲ್ಸ್ ಬಿಸ್ನೆಸ್ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಯುವತಿ ಬಾಡಿಗೆಗೆ ವಾಸಿಸುತ್ತಿದ್ದಳು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಂದಿಗೆ ಮನೆಗೆ ಆಗಾಗ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ತಗಾದೆ ತೆಗೆಯುತ್ತಿದ್ದನಂತೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದಾದ ಕೆಲವು ದಿನಗಳ ಬಳಿಕ ಮನೆಯಲ್ಲಿ ಯುವತಿಯ ಸ್ನೇಹಿತನೊಬ್ಬ ಉಳಿದುಕೊಂಡಿದ್ದ. ಇದನ್ನು ಗಮನಿಸಿದ ಮಾಲೀಕ ಮನೆಯಾಚೆ ನಿಲ್ಲಿಸಿದ್ದ ಸ್ನೇಹಿತನ ಬೈಕ್ ಅನ್ನು ಲಾಕ್ ಮಾಡಿದ್ದಾನೆ. ಮಾರನೇ ದಿನ ಬೆಳಗ್ಗೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ. ಮನೆ ಬಾಡಿಗೆಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ. ಪೊಲೀಸರು ಬಂದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತಾರೆ ಎಂದು ಯುವಕನಿಗೆ ಭಯ ಹುಟ್ಟಿಸಿದ್ದಾನೆ. ನಂತರ ತಾನು ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದ. ಈ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಯುವತಿ ಹೇಳಿದ್ದಾಳೆ.
ಕಳೆದ ಏಪ್ರಿಲ್ 11ರಂದು ಆಕೆಯ ಮನೆಗೆ ಹೋದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗಿಟ್ಟು ಅತ್ಯಾಚಾರ ಎಸಗಿದ್ದಾನೆ. ಬಳಿಕ ಕೃತ್ಯದ ಬಗ್ಗೆ ಯುವತಿ ಇತ್ತೀಚೆಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ದೂರಿನ ಮೇರೆಗೆ ನಿನ್ನೆ ಮನೆ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.










