ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಸರ್ವರೂ ಸಮಾನರು ಎಂದು ಪ್ರತಿಪಾದಿಸಿದ ಧೀಮಂತ ವ್ಯಕ್ತಿ : ಕೆ.ಟಿ.ರಾಧಾಕೃಷ್ಣ.

102
firstsuddi

ಚಿಕ್ಕಮಗಳೂರು : ಸಾಮಾಜಿಕ ಪರಿವರ್ತನೆಯ ಹರಿಕಾರ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಸಂದೇಶ, ಚಿಂತನೆ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಬೇರೂರಿರುವ ಜಾತೀಯತೆ ಕಣ್ಮರೆಯಾಗುತ್ತದೆ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಬಿಎಸ್‍ಪಿ ಕಛೇರಿಯಲ್ಲಿ ಇಂದು ನಡೆದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಸರ್ವರೂ ಸಮಾನರು ಎಂದು ಬಲವಾಗಿ ಪ್ರತಿಪಾದಿಸಿದ ಧೀಮಂತ ವ್ಯಕ್ತಿ, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ, ಅಸೃಷ್ಯತೆ, ದೌರ್ಜನ್ಯ, ಶೋಷಣೆ ಮತ್ತು ಜಾತೀಯತೆ ವಿರುದ್ದ ಬದುಕಿನುದ್ದಕ್ಕೂ ಹೋರಾಟ ನಡೆಸಿದ ಮಹಾನ್ ಶಕ್ತಿ ಎಂದರು.

ಪೆರಿಯಾರ್ ಅವರು ಸಮಾಜದಲ್ಲಿದ್ದ ಮೂಢನಂಬಿಕೆಗಳ ವಿರುದ್ದ ಜನರಲ್ಲಿ ಜಾಗೃತಿ ಮೂಢಿಸುವುದರ ಜೊತೆಗೆ ವೈಜ್ಞಾನಿಕ ತಳಹದಿಯಲ್ಲಿ ಧರ್ಮವಿರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್‍ರಂತಹ ಪ್ರಗತಿಪರರು, ಸಮಾಜ ಸುಧಾರಕರು ಹುಟ್ಟಿ ಬರದಿದ್ದಲ್ಲಿ ಕೆಳವರ್ಗದ ಜನ ಮರ್ಯಾದೆಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಸಮಾಜ ಸುಧಾರಣೆಯ ಕಾರ್ಯದಲ್ಲಿ ಮಹತ್ತರವಾದ ಪಾತ್ರ ವಹಿಸಿದವರು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಎಂದು ತಿಳಿಸಿದರು.

ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪ ನಮನ ಸಲ್ಲಿಸಲಾಯಿತು, ಜಿಲ್ಲಾ ಸಹೋದರತ್ವ ಸಮಿತಿ ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳಾ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ನಗರ ಖಜಾಂಚಿ ನವೀನ್, ಗಿರೀಶ್, ಸೋಮಶೇಖರ್ ಉಪಸ್ಥಿತರಿದ್ದರು.