ಬಳ್ಳಾರಿ: ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಡಿಎಆರ್ ಪೊಲೀಸ್ ಹೆಡ್‌ಕ್ವಾಟ್ರಸ್‌ನಲ್ಲಿ ನಡೆದಿದೆ.
ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕು ಆನೆಕಲ್ ತಾಂಡ ನಿವಾಸಿ ಪ್ರಕಾಶ್ ನಾಯ್ಕ್ (25) ಆತ್ಮಹತ್ಯೆ ಮಾಡಿಕೊಂಡಿರುವ ಪೇದೆ. ಪ್ರಕಾಶ್ ನಾಯ್ಕ್ 2021ನೇ ಬ್ಯಾಚ್‌ನಲ್ಲಿ ಡಿಎಆರ್ ಪೊಲೀಸ್ ಆಗಿ ನೇಮಕ ಆಗಿದ್ದರು.
ಪ್ರಕಾಶ್ ನಾಯ್ಕ್‌ಗೆ ಆಂತರಿಕ ಭದ್ರತೆ ಟ್ರೈನಿಂಗ್‌ಗಾಗಿ ಬೆಂಗಳೂರಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದರು. ಇದಾದ ಬಳಿಕ ಪ್ರಕಾಶ್ ನಾಯ್ಕ್ ಕ್ವಾಟ್ರಸ್ ರೂಂನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕಾಶ್ ಟ್ರೈನಿಂಗ್‌ಗೆ ಹೆದರಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕಾಶ್ ನಾಯ್ಕ್ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎಂಬ ಅನುಮಾನ ಇದೀಗ ಮೂಡಿದೆ. ಎಂಜಿನಿಯರಿಂಗ್ ಮಾಡಿ ಪೊಲೀಸ್ ಆಗಬೇಕು ಎಂದು ಬಂದಿದ್ದ ಯುವಕನ ದುರಂತ ಅಂತ್ಯವಾಗಿದೆ. ಆತ್ಮಹತ್ಯೆಗೂ ಮುನ್ನ ರಾತ್ರಿ 12 ಗಂಟೆಯವರೆಗೂ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಪ್ರಕಾಶ್ ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದ ಎನ್ನಲಾಗಿದೆ.
ಮೇಲಾಧಿಕಾರಿಗಳಾದ ತಿಪ್ಪೇಸ್ವಾಮಿ ಡಿವೈಎಸ್‍ಪಿ, ಅಮೋಘ ಆರ್‌ಪಿಐ, ದೀವಾಕರ್ ಆರ್‍ಎಸ್‍ಐ, ಖಾದರ್ ಬಾಷಾ ಎಹೆಚ್‍ಸಿ ಅವರಿಂದ ಕಿರುಕುಳವಾಗ್ತಿದೆ. ರಜೆ ಪಡೆಯಲು ಅಧಿಕಾರಿಗಳಿಗೆ ದುಡ್ಡು ಕೊಡಬೇಕು. ಅನಾರೋಗ್ಯದ ಹಿನ್ನೆಲೆ ಸಿಸಿಟಿ ಟ್ರೈನಿಂಗ್ ಬೇಡ ಎಂದಿದ್ದು, ಟ್ರೈನಿಂಗ್ ಕ್ಯಾನ್ಸಲ್ ಮಾಡಿಕೊಂಡು ಹಣ ಕೊಟ್ಟಿದ್ದನೆಂದು ಪ್ರಕಾಶ್ ತಿಳಿಸಿರುವುದಾಗಿ ಆತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










