ನವದೆಹಲಿ: ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ. 2023ರ ಜೂನ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿತ್ತು. ಇದೀಗ ಮೂರು ತಿಂಗಳವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.
ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ 2022ರ ಏಪ್ರಿಲ್ 1ರಂದು 500 ರೂ ಶುಲ್ಕ ವಿಧಿಸಲಾಗಿತ್ತು. 2022ರ ಜುಲೈ 1ರಿಂದ ಶುಲ್ಕವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.










