ಬೆಂಗಳೂರು: ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪ್ರಾಮಾಣಿಕತೆ, ನಿಷ್ಠೆ ಹಾಗು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ. ಬಡವರಿಗೆ, ಜನಪರವಾದ ಕೆಲಸ ಮಾಡಿದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ನವ ಕರ್ನಾಟಕ ದಿಂದ ನವ ಭಾರತ ನಿರ್ಮಿಸೋಣ. ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ . ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾಯಾಗಿದ್ದ ಡಾ. ಸುಧಾಕರ್ ರಾವ್ ದಕ್ಷತೆಯಿಂದ ಕೆಲಸ ಮಾಡಿದವರು ಎಂದು ಅವರು ಹೇಳಿದರು.
ಕಾರ್ಯಾಂಗ ಜನಸ್ಪಂದನೆಯ ಕೆಲಸ ಮಾಡಿದಾಗ ಸರ್ಕಾರಕ್ಕೆ , ವ್ಯವಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಜನಸಂಖ್ಯೆ ಹೆಚ್ಚಿದ್ದು, ಎಲ್ಲರ ಅಶೋತ್ತರಗಳೂ ಹೆಚ್ಚಾಗಿವೆ. ಯುವಕರು, ವಿದ್ಯಾವಂತರ ನೌಕರರ ಜೀವನದ ಗುಣಮಟ್ಟವೂ ಉತ್ತಮಗೊಳ್ಳಬೇಕು. ಅವರು ಚೆನ್ನಾಗಿದ್ದರೆ ಸಂತೋಷದಿಂದಿದ್ದರೆ ಸರ್ಕಾರದ ಕೆಲಸಗಳು ಉತ್ತಮವಾಗಿ ಆಗುತ್ತದೆ. ನಮ್ಮ ಸರ್ಕಾರ ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ, ತಮ್ಮ ಜೀವದ ಹಂಗನ್ನು ತೊರೆದು ಸರ್ಕಾರಕ್ಕೆ ಸಹಾಯಕವಾಗಿ ನಿಂತು ಜನರ ಸೇವೆಯನ್ನು ಅತ್ಯುತ್ತಮವಾಗಿ ಮಾಡಿದೆ ಎಂದರು.










