ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್‍ಐ ಅಭ್ಯರ್ಥಿಗಳು…

85
firstsuddi

ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ, ಸೇರಿದಂತೆ 55ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಮತ್ತೊಂದೆಡೆ ಅಕ್ರಮ ಬಯಲಾಗುತ್ತಿದ್ದಂತೆ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಪಿಎಸ್ಐ ಅಕ್ರಮ ಪರೀಕ್ಷಾ ಹಗರಣದಲ್ಲಿ ನೊಂದ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಸುಮಾರು 2 ಪುಟಗಳ ಪತ್ರ ಬರೆದಿರುವ ಅಭ್ಯರ್ಥಿಗಳು, ತಮಗೆ ನ್ಯಾಯ ಒದಗಿಸಿಕೊಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿಎಸ್ಐ ಪರೀಕ್ಷೆಯ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು, ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು. ಆದರೆ ನಿಯತ್ತಿನಿಂದ, ಪ್ರಾಮಾಣಿಕವಾಗಿ ಬರೆದು ಪಾಸಾದವರಿಗೆ ಮೋಸವಾಗಬಾರದು. 2021ರಲ್ಲಿ ನಡೆದ ಎಫ್ಡಿಎ ಪರೀಕ್ಷೆಯಲ್ಲಿ ಕೂಡ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿನ್ಯಾಯ ಕೊಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ, ಅವರು ಸೂಕ್ತ ತನಿಖೆಗೆ ಆದೇಶ ಮಾಡಿ, ನಮಗೆ ನ್ಯಾಯ ಕೋಡಿಸುತ್ತಾರೆ ಅನ್ನೋ ನಂಬಿಕೆ ಇದೆ ಅಂತ ಪತ್ರದಲ್ಲಿ ಬರೆಯಲಾಗಿದೆ.

ಒಂದು ವೇಳೆ ನ್ಯಾಯಕೊಡಿಸದೇ ಹೋದ್ರೆ ನಾವು ಮುಂದೆ ಟೆರರಿಸ್ಟ್ ಗಳ ಕೈಜೋಡಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎನ್ನುವಂತ ವ್ಯವಸ್ಯೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ. ಬದಲಾಗಿ ಟೆರೆರಿಸ್ಟ್ ಗಳ ಜೊತೆ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ ಅಂತ ಎಚ್ಚರಿಸಿದ್ದಾರೆ.