ಬೆಂಗಳೂರು : ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಎರಡು ತಿಂಗಳು ಕಳೆದರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಸಿಗದ ಹಿನ್ನೆಲೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಈವರೆಗೂ ಸರ್ಕಾರದ ಪರವಾಗಿ ಯಾರೋಬ್ಬರು ಅವರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳುವ ಮತ್ತು ಪರಿಹಾರ ಧನವನ್ನು ನೀಡುವ ಪ್ರಯತ್ನವನ್ನು ಸಹ ಮಾಡಿಲ್ಲ. ಆಳುವ ವರ್ಗ ಹೀಗೆ ಮೌನಕ್ಕೆ ಶರಣಾದರೆ ಬಡ ರೈತರಿಗೆ ಯಾರು ದಿಕ್ಕು? ಮೂಡಿಗೆರೆ ತಾಲೂಕಿನಲ್ಲಿ ಗುಡ್ಡ ಕುಸಿದು ಹಲವು ಮನೆಗಳು ನೆಲಸಮಗೊಂಡಿವೆ. ಸಂತ್ರಸ್ತರು ವಾಸಿಸಲು ಇದುವರೆಗೂ ಬದಲಿ ವ್ಯವಸ್ಥೆ ಮಾಡಿಲ್ಲ, ಕನಿಷ್ಠ ಬಾಡಿಗೆ ರೂಪದಲ್ಲಿ ಬೇರೆಡೆಯ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಹಾಗೆ ಇವರಿಗೆ ರೂ.10,000 ಸಹಾಯಧನವನ್ನು ನೀಡಿಲ್ಲ. ಅವರ ಬದುಕು ಬೀದಿಗೆ ಬಂದಿದೆ, ಸರ್ಕಾರ ಕೂಡಲೆ ಗಮನ ಹರಿಸಲಿ. ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾದಾಗ ಸಮ್ಮಿಶ್ರ ಸರ್ಕಾರ ರೂ.10000 ಬಾಡಿಗೆ ಹಾಗೂ ಹೊಸ ಮನೆ ನಿರ್ಮಾಣಕ್ಕೆ ರೂ.9,80,000 ಸಹಾಯಧನ ನೀಡಿತ್ತು. ಈಗ ಪ್ರವಾಹ ಬಂದು 2 ತಿಂಗಳಾಗಿದೆ, ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೂ ಅಗತ್ಯ ಪ್ರಮಾಣದ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಲ್ಲ, ಬಾಡಿಗೆ ರೂಪದಲ್ಲಿ ಕೇವಲ ರೂ.5000 ಮಾತ್ರ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇದುವರೆಗೆ ಕೇವಲ 303 ಶೆಡ್ಗಳನ್ನು ನಿರ್ಮಿಸಲಾಗಿದೆ. ಇಷ್ಟು ಶೆಡ್ಗಳನ್ನು ಬರೀ ನನ್ನ ಕ್ಷೇತ್ರ ಬಾದಾಮಿಯಲ್ಲಿಯೇ ನಿರ್ಮಿಸಬೇಕಿತ್ತು. ಸಂತ್ರಸ್ತರ ಸಂಖ್ಯೆ ಅಧಿಕವಾಗಿದೆ, ಶೆಡ್ಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಇದುವರೆಗೂ ರಾಜ್ಯಾದ್ಯಂತ ಶೆಡ್ಗಳ ನಿರ್ಮಾಣಕ್ಕೆ ಕೇವಲ ರೂ.18 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.










