ಬೆಂಗಳೂರು : ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರ ಕಲಾವಿದ ಬಿ.ಕೆ.ಎಸ್ ವರ್ಮಾ(74) ಅವರು ಹೃದಯಾಘಾತದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವರ್ಮಾ ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 1986ರಲ್ಲಿ ವರ್ಮಾ ಅವರ ಮೊದಲ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದವು.
ವರ್ಮಾ ಅವರ ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು, ತಾಯಿ ಜಯಲಕ್ಷ್ಮೀ ಚಿತ್ರಕಲಾವಿದರು. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಸಾಧನೆಗೆ ಲಲಿತಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.










