ಪ್ರಿಯಕರನಿಂದ ಬ್ಲ್ಯಾಕ್‌ಮೇಲ್‌ – ವೀಡಿಯೊ ಆನ್ ಮಾಡಿ ಮಹಿಳೆ ಆತ್ಮಹತ್ಯೆಗೆ ಶರಣು…

45
firstsuddi

ವಿಜಯಪುರ: ವಿವಾಹಿತೆ ಮಹಿಳೆಯೊಬ್ಬಳು ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಮೊಬೈಲ್ ವೀಡಿಯೊ ಆನ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಸುಹಾನಾ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ. ಆಕೆಗೆ ಪ್ರಿಯಕರ ಅಲ್ತಾಫ್ ಸುಲೈಮಾನ್ ಗಂಡನನ್ನು ಬಿಟ್ಟು ನನ್ನೊಂದಿಗೆ ಬಾ, ಇಲ್ಲವೆಂದರೆ ನನ್ನೊಂದಿಗಿರುವ ಫೋಟೋವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಹೇಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಇದರಿಂದ ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವೀಡಿಯೊ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಏಪ್ರಿಲ್ 15ರಂದು ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಕಾರಣ ತಿಳಿಸಿ ಮೊಬೈಲ್ ವೀಡಿಯೊ ಆನ್ ಮಾಡಿ ನೇಣಿಗೆ ಶರಣಾಗಿದ್ದಾಳೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೈಮಾನ್ 1 ವರ್ಷದ ಹಿಂದೆ ಸುಹಾನಾಳೊಂದಿಗೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್‌ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾಗೆ ಪೋಷಕರು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಿಕೊಟ್ಟಿದ್ದರು.

ಇನ್ನೂಸ್ ಪಾರ್ಥನಲ್ಲಿ ಹಾಗೂ ದಸ್ತಗಿರಸಾಬ ಮುಳವಾಡ ಜೊತೆಗೆ ವಿವಾಹಿತೆ ತಂದೆ ಅಸ್ಲಂ ಮುಲ್ಲಾ ರಾಜಕೀಯ ದ್ವೇಷವಿತ್ತು. ದಸ್ತಗಿರಸಾಬ ಮುಳವಾಡ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಕ್ಕೆ ಅಸ್ಲಂ ಮುಲ್ಲಾ ಕಾರಣವೆಂದು ಸಿಟ್ಟಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಹಾನಾಳಿಗೆ ಮೂವರು ಸೇರಿ ಬೆನ್ನುಹತ್ತಿ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೃತ ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.