ಮೈಸೂರು: ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಯುವತಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ.
ನಿಸರ್ಗ (20) ಮೃತ ಯುವತಿ. ಕೆ.ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ನಿಸರ್ಗ ಅದೇ ಕಾಲೇಜಿನ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸಿದ್ದಳು.
ಇತ್ತೀಚೆಗೆ ಕೆಲ ದಿನಗಳಿಂದ ಸುಹಾಸ್ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು, ಆತ ಮತ್ತೊಬ್ಬ ಯುವತಿ ಜೊತೆ ತಿರುಗಾಡುತ್ತಿರುವುದು ಈಕೆಗೆ ಗೊತ್ತಾಗಿದೆ. ಅಂದಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಿಸರ್ಗ ಆ ಯುವತಿಯ ಪೋಷಕರಿಗೂ ಸುಹಾಸ್ ಜತೆಗಿನ ಮಗಳ ಸಲಿಗೆಯ ಬಗ್ಗೆ ತಿಳಿಸಿದ್ದಾಳೆ. ಆದರೆ ಆ ಯುವತಿಯ ಪೋಷಕರು ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರೇಪಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ನಿಸರ್ಗ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಕುರಿತು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










