ಶಿವಮೊಗ್ಗ : ಪ್ರೇಮ ವೈಫಲ್ಯದ ಹಿನ್ನಲೆ ಪ್ರಿಯತಮೆಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಶಿವುಮೂರ್ತಿ ಸಾವನ್ನಪ್ಪಿದ ಯುವಕ. ಹೊಸನಗರ ತಾಲ್ಲೂಕಿನ ನೇರಲಗಿ ಗ್ರಾಮದ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲ್ಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದನು. ಕೊಲೆಯಾದ ಕವಿತಾ ಹಾಗೂ ಕೊಲೆಗೈದ ಆರೋಪಿ ಶಿವಮೂರ್ತಿ ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಅಂಬುಲೆನ್ಸ್ ಚಾಲಕನ ಜೊತೆ ಕವಿತಾಗೆ ಪ್ರೇಮಾಂಕುರವಾಗುತ್ತಿದ್ದಂತೆ ಶಿವಮೂರ್ತಿಯನ್ನು ದೂರ ಮಾಡ ತೊಡಗಿದ್ದಳು.
ಇದರಿಂದ ರೊಚ್ಚಿಗೆದ್ದ ಭಗ್ನಪ್ರೇಮಿ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿ ಕರೆಯಿಸಿದ್ದಾನೆ. ಅಲ್ಲಿ ಡೆತ್ ನೋಟ್ ಬರೆದಿಟ್ಟು, ಕುತ್ತಿಗೆಯನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿ, ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ ಕವಿತಾಳನ್ನು ತಾನೇ ಕೊಲೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ. ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.










