ಮೈಸೂರು: ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಯುವಕನಿಂದ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.
ಯುವತಿ ಹರ್ಷಿತಾ (21) ಮೃತ ದುರ್ದೈವಿ. ಅದೇ ಗ್ರಾಮದಲ್ಲಿ ವಾಸವಿದ್ದ ಶಿವು ಎನ್ನುವ ಯುವಕ ತನ್ನ ಪ್ರೀತಿಸುವಂತೆ ಹರ್ಷಿತಾ ಹಿಂದೆ ಬಿದ್ದಿದ್ದ. ಆದರೆ ಶಿವು ಮನವಿಯನ್ನು ಹರ್ಷಿತಾ ತಿರಸ್ಕರಿಸುತ್ತಿದ್ದಳು. ಈ ಮಧ್ಯೆ ಹರ್ಷಿತಾಳಿಗೆ ಮನೆಯವರು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದು, ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ನಂತರ ತನ್ನನ್ನು ಮದುವೆಯಾಗುವಂತೆ ಇನ್ನಷ್ಟು ಕಿರುಕುಳ ನೀಡಲು ಪ್ರಾರಂಭಿಸಿದ್ದ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಹುಳುಗಳನ್ನು ಸ್ವಚ್ಛಗೊಳಿಸಲು ಇಟ್ಟಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಕುಟುಂಬಸ್ಥರು ಹರ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಆರೋಪ ಮಾಡಿದ್ದು, ಈ ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಶಿವುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.










