ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಬೆಳಗ್ಗೆ ನಗರದ ಕೆಂಗೇರಿ ಕೊಡಿಗೆಪಾಳ್ಯದಲ್ಲಿ ನಡೆದಿದೆ.
ಮೃತನನ್ನು ರಾಕೇಶ್ ಎಂದು ಗುರುತಿಸಲಾಗಿದ್ದು, ಈತ ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ನಿವಾಸಿ. ರಾಕೇಶ್ ಐದಾರು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆ ಯುವತಿ ಬೇರೊಬ್ಬ ಯುವಕನ ಜೊತೆ ಮದುವೆಗೆ ಒಪ್ಪಿಕೊಂಡಿದ್ದಳು. ಪರಿಣಾಮ ರಾಕೇಶನನ್ನು ನಿಧಾನವಾಗಿ ದೂರ ಮಾಡುತ್ತಾ ಬಂದಳು. ಇತ್ತ ಪ್ರಿಯತಮೆಯ ವರ್ತನೆಯಿಂದ ಅನುಮಾನಗೊಂಡ ರಾಕೇಶ್, ಆಕೆಯನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ನಡುವೆ ಯುವತಿ ತನ್ನ ನಿರ್ಧಾರದ ಕುರಿತು ಬಾಯಿಬಿಟ್ಟಿದ್ದಾಳೆ. ಇದರಿಂದ ಮನನೊಂದಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರಾಕೇಶ್ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.
ಈ ಸಂಬಂಧ ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.










