ಚಿಕ್ಕಮಗಳೂರು: ಪ್ರೇಮ ವೈಫಲ್ಯದಿಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ಪ್ರೇಮ ವೈಫಲ್ಯದಿಂದ ಅಪ್ರಾಪ್ತ ಬಾಲಕಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ (17) ಎಸ್.ಕೆ ಮೇಗಲ್ ಗ್ರಾಮದ ನಿತೇಶ್ ಎಂಬವನನ್ನ ಪ್ರೀತಿಸುತ್ತಿದ್ದಳು. ಆತ ವಂಚಿಸಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ, ಜನವರಿ 10ರಂದು ಕಾಲೇಜಿನಿಂದ ಮನೆಗೆ ಬಂದ ದೀಪ್ತಿ ಕಳೆನಾಶಕ ಸೇವಿಸಿದ್ದಾಳೆ. ಬಳಿಕ ಮನೆಯಲ್ಲಿದ್ದ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ.
ಪೋಷಕರು ಕೂಡಲೇ ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ದೀಪ್ತಿ ಶನಿವಾರ ಸಂಜೆ ಸಾವನ್ನಪ್ಪಿದ್ದಾಳೆ.
ಸಾಯುವ ಮುನ್ನ ಆಕೆ ‘ನಾನು ನಿತೇಶ್ ನನ್ನ ಪ್ರೀತಿಸುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಜಗಳದಿಂದಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಡೆತ್ ನೋಟ್ ಬರೆದಿದ್ದಾಳೆ. ಈ ಕುರಿತು ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ನಿತೇಶ್ ಇದೀಗ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಲ್ಲಿ ಕುದುರೆಮುಖ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದೀಪ್ತಿ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಆರೋಪಿ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿ ಬಂಧಿಸಿದ್ದಾರೆ.










