ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ ಬಳಿಕ ಪಾಗಲ್ ಪ್ರೇಮಿಯೊಬ್ಬ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿರುವ ಘಟನೆ ನಗರದ ಲಗ್ಗೆರೆಯಲ್ಲಿ ನಡೆದಿದೆ.
ನವ್ಯ (25) ಕೊಲೆಯಾದ ಯುವತಿ. ಪ್ರಿಯಕರ ಪ್ರಶಾಂತ್ ಕೊಲೆ ಮಾಡಿದ ಆರೋಪಿ. ಯುವತಿ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನದ ಹಿನ್ನೆಲೆ ಪ್ರಶಾಂತ್ ಕೃತ್ಯ ಎಸಗಿದ್ದಾನೆ.
ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದ ದೂರ ಸಂಬಂಧಿಕರು. ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬುವವನನ್ನ ಪ್ರೀತಿಸುತ್ತಿದ್ದಳು. ಕಳೆದ ಮಂಗಳವಾರ ನವ್ಯ ಹುಟ್ಟುಹಬ್ಬ ಇತ್ತು. ಅಂದು ಆಕೆ ಬ್ಯುಸಿ ಇದ್ದ ಕಾರಣ ಪ್ರಶಾಂತ್ ನಿನ್ನೆ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದ. ಅದರಂತೆ ರಾತ್ರಿ ಕೇಕ್ ಕತ್ತರಿಸಿದ ಬಳಿಕ ಪ್ರಶಾಂತ್ ಆಕೆಯ ಕತ್ತನ್ನು ಕೊಯ್ದು ಹತ್ಯೆ ಮಾಡಿದ್ದಾನೆ.
ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.










