ಚಿಕ್ಕಮಗಳೂರು : ಎನ್.ಆರ್.ಪುರ ತಾಲ್ಲೂಕಿನ ಬಸವನಗದ್ದೆ ಗ್ರಾಮದ ಸರ್ವೆ ನಂ. 74 ರಲ್ಲಿರುವ 4 ಎಕರೆ ಭೂಮಿಯನ್ನು ಅಲ್ಲಿನ ಪ.ಜಾತಿ/ಪ.ವರ್ಗದವರಿಗೆ ಆಶ್ರಯ ಮನೆ ನಿರ್ಮಾಣಕ್ಕಾಗಿ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ನಿನ್ನೆ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಬಸವನಗದ್ದೆ ಗ್ರಾಮದ ಸರ್ವೆ ನಂ. 74 ರಲ್ಲಿ 1 ಎಕರೆ ಜಾಗವನ್ನು ಅಂಬೇಡ್ಕರ್ ಭವನಕ್ಕಾಗಿ ಮಂಜೂರು ಮಾಡಲಾಗಿದೆ, ಅದಕ್ಕೆ ಹೊಂದಿಕೊಂಡಂತೆ 4 ಎಕರೆ ಭೂಮಿ ಖಾಲಿ ಇದೆ ಎಂದು ತಿಳಿಸಿದರು.
ಬಸವನಗದ್ದೆ ಗ್ರಾಮದ ಪ.ಜಾತಿ/ಪ.ವರ್ಗದ ನೂರು ಕುಟುಂಬದವರು ಆಶ್ರಯ ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ ಎಂದ ಪದಾಧಿಕಾರಿಗಳು ಹಾಗಾಗಿ ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಿರುವ 4 ಎಕರೆ ಜಾಗವನ್ನು ಆಶ್ರಯ ಮನೆ ನಿರ್ಮಾಣಕ್ಕಾಗಿ ಮಂಜೂರು ಮಾಡಿ ಕಲ್ಲು ಬಾಂದು ಹಾಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಎನ್.ಆರ್.ಪುರ ತಾಲ್ಲೂಕಿನ ಮೆಣಸೂರು ಗ್ರಾಮದ ಸರ್ವೆ ನಂ.86 ರಲ್ಲಿ ಮಲ್ಲೇಶ ಎಂಬುವವರಿಗೆ 4.32 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು ಆ ಭೂಮಿ ಮಲ್ಲೇಶ್ ಅವರ ಸ್ವಾಧೀನಾನುಭವದಲ್ಲಿದೆ ಎಂದು ಹೇಳಿದರು.
ಆ ಭೂಮಿ ಅರಣ್ಯ ಇಲಾಖೆಗೆ ಸೇರ್ಪಡೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಲ್ಲೇಶ್ ಅವರಿಗೆ ಸಾಗುವಳಿ ಮಾಡಲು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಪದಾಧಿಕಾರಿಗಳು 1975 ರಿಂದ ಸ್ವಾಧೀನಾನುಭವ ಹೊಂದಿರುವ ಮಲ್ಲೇಶ್ ಅವರಿಗೆ ಕಿರುಕುಳ ನೀಡದಂತೆ ಅರಣ್ಯ ಇಲಾಖೆಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕರಾದ ಡಿ.ರಾಮು, ಮಹೇಂದ್ರ ಸ್ವಾಮಿ, ಶೃಂಗೇರಿ ಕ್ಷೇತ್ರ ಸಂಚಾಲಕ ಎಸ್.ಹನುಮಂತ, ಗಣೇಶ, ಅಶೋಕ್ ಕುಮಾರ್, ಗಿರೀಶ್ ಹಾಜರಿದ್ದರು.










