ಗಾಂಧಿನಗರ : ಗುಜರಾತ್ ನ ವಲ್ಸಾದ್ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ಕಳೆದ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಸಾರಿಗಾಮ್ ದಲ್ಲಿರುವ ಸಿಐಡಿಸಿ ರಾಸಾಯನಿಕ ವಲಯದಲ್ಲಿರುವ ವ್ಯಾನ್ ಪೆಟ್ರೋಕೆಮ್ ಫಾರ್ಮಾ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯ ವೇಳೆ ಸ್ಫೋಟದೊಂದಿಗೆ ಬೆಂಕಿಯು ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡದ ಒಂದು ಭಾಗವು ಕುಸಿದಿದೆ.
ವ್ಯಾನ್ ಪೆಟ್ರೋಕೆಮ್ ಫಾರ್ಮಾ ಕಂಪನಿಯಲ್ಲಿ ಹಠಾತ್ ಸ್ಫೋಟ ಸಂಭವಿಸಿರುವ ಬಗ್ಗೆ ನಮಗೆ ಕರೆ ಬಂದಿದೆ. ಇಲ್ಲಿಯವರೆಗೆ ಎರಡು ಶವಗಳು ಪತ್ತೆಯಾಗಿದ್ದು, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಇಲ್ಲಿಗೆ ತಲುಪಿದಾಗ ಯಾವುದೇ ಭದ್ರತಾ ಸಿಬ್ಬಂದಿಗಳು ಇರಲಿಲ್ಲ. ಅಲ್ಲದೇ ನಮಗೆ ಬೆಂಕಿ ನಂದಿಸಲು ನೀರನ್ನು ಬಳಸಲಾಗಲಿಲ್ಲ. ಏಕೆಂದರೆ ಯಾವ ರಾಸಾಯನಿಕವು ಬೆಂಕಿಗೆ ಕಾರಣವಾಯಿತು ಎಂಬುದು ನಮಗೆ ಖಚಿತವಾಗಿರಲಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ರಾಹುಲ್ ಮುರಾರಿ ಹೇಳಿದರು.










