ಮೂಡಿಗೆರೆ : ಮುಳ್ಳುಹಂದಿ ಬೇಟೆಯಾಡಲು ಸುರಂಗದೊಳಗೆ ನುಗ್ಗಿದ ಇಬ್ಬರು ಬೇಟೆಗಾರರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡು ಮೂಲದ ಗೋವಿಂದರಾಜು (30) ಹಾಗೂ ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದೆ. ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯಲು ಬಂದಿದ್ದ ತಮಿಳುನಾಡು ಮೂಲದ ನಾಲ್ವರು ಕಾರ್ಮಿಕರು ಬೆಟ್ಟದಲ್ಲಿ ಮುಳ್ಳುಹಂದಿ ಶಿಕಾರಿಗೆ ತೆರಳಿದ್ದರು. ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ ಬಂದಿದ್ದು, ಇನ್ನಿಬ್ಬರು ಸುರಂಗದೊಳಗೆ ಸಿಲುಕಿದ್ದು, ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ ಗುಹೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.










