ಲಾಹೋರ್ : ಬಂಧನ ಭೀತಿಯಿಂದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬಿಬಿ ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್ ದುಬೈಗೆ ಪಲಾಯನಗೈದಿದ್ದಾರೆ.
ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಮ್ಮನ್ನು ಬಂಧಿಸಬಹುದು ಎಂಬ ವರದಿಗಳ ಬೆನ್ನಲ್ಲೇ ಅವರು ದೇಶ ತೊರೆದಿದ್ದಾರೆ. ಈಗಾಗಲೇ ಫರಾಹ್ ಖಾನ್ ಅವರ ಪತಿ ಅಹ್ಸಾನ್ ಜಮಿಲ್ ಗುಜ್ಜರ್ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಫರಾಹ್ ಖಾನ್ ಅವರು ಭಾನುವಾರ ದುಬೈಗೆ ತೆರಳಿದ್ದಾರೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಅಧಿಕಾರಿಗಳನ್ನು ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಿಸಲು ಫರಾಹ್ ಅವರು ಲಂಚ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಇದುವರೆಗೂ ಫರಾಹ್ ಅವರು 6 ಬಿಲಿಯನ್ ಪಾಕಿಸ್ತಾನಿ ರೂಪಿಯನ್ನು (32 ಮಿಲಿಯನ್ ಯುಎಸ್ ಡಾಲರ್) ಲಂಚ ಪಡೆದಿದ್ದಾರೆ. ಹೀಗಾಗಿ ಅವರನ್ನು ʼಎಲ್ಲಾ ಹಗರಣಗಳ ತಾಯಿʼ ಎಂದು ಪ್ರತಿಪಕ್ಷಗಳು ಕರೆದಿವೆ.
ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿದೆ. ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿ, ಸಂಸತ್ತಿನ ಕಲಾಪವನ್ನು ಏಪ್ರಿಲ್ 25ರವರೆಗೆ ಮುಂದೂಡಿ ಉಪಸಭಾಪತಿ ಖಾಸಿಂ ಖಾನ್ ಸೂರಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಪಾಕಿಸ್ತಾನದ ಹಂಗಾಮಿ ಪ್ರಧಾನಿಯನ್ನಾಗಿ ಗುಲ್ಜಾರ್ ಅಹ್ಮದ್ ರನ್ನು ನೇಮಕ ಮಾಡಲಾಗಿದೆ. ಹೊಸ ಹಂಗಾಮಿ ಪ್ರಧಾನಿ ಅಧಿಕಾರ ಸ್ವೀಕರಿಸುವವರೆಗೂ ಇಮ್ರಾನ್ ಖಾನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.










