ಬಣಕಲ್ : ಬಿಎಸ್‍ಎನ್‍ಎಲ್ ಹಾಗೂ ಮೆಸ್ಕಾಂನ ಅಸಮರ್ಪಕ ಸೇವೆ ಖಂಡಿಸಿ ಭಾರತಿಬೈಲ್‍ನಲ್ಲಿ ಸೇವಾಭಾರತಿ ಸಮಾಜ ಸೇವಾ ಸಂಘ, ಅಂಬೇಡ್ಕರ್ ಸಂಘ, ಮತ್ತು ಬಿ ಹೊಸಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಮೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಸಣ್ಣಪುಟ್ಟ ಮಳೆಗೂ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು ವಾರಗಟ್ಟಲೇ ವಿದ್ಯುತ್ ಸಂಪರ್ಕ ನೀಡದೆ ಮೆಸ್ಕಾಂ ಸಮರ್ಪಕ ಸೇವೆಗೆ ಮುಂದಾಗುತ್ತಿಲ್ಲ. ಮರ ಬಿದ್ದಿದೆ, ಸಿಬ್ಬಂದಿಗಳಿಲ್ಲ, ವಿದ್ಯುತ್ ಕಂಬ ಹಾನಿಯಾಗಿದೆ ಎಂಬ ಸಿದ್ದ ಉತ್ತರಗಳನ್ನು ನೀಡುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಗ್ರಾಮ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಸರಿಯಾಗಿ ಸಂವಹನ ಸಾದ್ಯವಾಗದೇ ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತಾಗಿದೆ. ನೆಟ್‍ವರ್ಕ್ ಸಮಸ್ಯೆ ಸರಿ ಪಡಿಸುವಂತೆ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಇದ್ದಾಗ ಮಾತ್ರ ನೆಟ್‍ವರ್ಕ್ ಸರಿ ಇರುತ್ತದೆ. ವಿದ್ಯುತ್ ಸರಿಯಾಗಿ ಇಲ್ಲದೆ ತಿಂಗಳುಗಳೆ ಕಳೆದಿದ್ದೂ ಇದರಿಂದಾಗಿ ನೆಟ್‍ವರ್ಕ್ ಸಹ ಇಲ್ಲದೆ ಸಮಸ್ಯೆಯಾಗಿದೆ. ಬಿಎಸ್‍ಎನ್‍ಎಲ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಸಹಾಯಕ ಅಭಿಯಂತರರಾದ ಮಂಜುನಾಥ್ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಿಎಸ್‍ಎನ್‍ಎಲ್ ಅಧಿಕಾರಿಗಳು ಸ್ಥಳಕ್ಕೆ ಬರದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಬಗೆಹರಿಯದೆ ಇದ್ದರೆ ಮುಂದಿನ ಸೋಮವಾರ ಸಂಘ ಸಂಸ್ಥೆಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿ ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ರವಿಗೌಡ, ಗ್ರಾಮಸ್ಥರಾದ ದಿಲೀಪ್ ಕನ್ನಗೆರೆ, ಶಿವಪ್ರಸಾದ್, ನಾಗೇಶ್, ರವಿ ಬಾನಳ್ಳಿ, ಶಶಿಧರ್, ಸತೀಶ್, ರಾಮಚಂದ್ರ, ಸತೀಶ್, ಶಶಿಕಂತ್,ಮಹೆಂದ್ರ, ಪ್ರದೀಪ್‍ಗೌಡ, ಹಾಗೂ ಸೇವಾಭಾರತಿ ಸಮಾಜ ಸೇವಾ ಸಂಘ, ಅಂಬೇಡ್ಕರ್ ಸಂಘದ ಪಧಾಧಿಕಾರಿಗಳು ಗ್ರಾಮಸ್ಥರು ಇದ್ದರು.










