ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಆತ್ಮಬಲ, ಆತ್ಮಸ್ಥೈರ್ಯ, ಆತ್ಮವಿಶ್ವಾಸ ಅತಿ ಮುಖ್ಯ : ಶ್ರೀ ಗುಣನಾಥ ಸ್ವಾಮೀಜಿ.

80
firstsuddi

ಚಿಕ್ಕಮಗಳೂರು: ವಿದ್ಯಾರ್ಥಿಗಳು ಬಾವಿಯೊಳಗಿನ ಕಪ್ಪೆಯಂತಾಗಬಾರದು ಆ ಮನೋಭಾವದಿಂದ ಹೊರಬಂದು ಲೋಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಲಹೆ ನೀಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಜಿಲ್ಲೆಯ ಬಿಜಿಎಸ್ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಓದುವ ಮೂಲಕ, ನೋಡುವ ಮೂಲಕ, ಕೇಳುವುದರ ಜೊತೆಗೆ ಸ್ವತಃ ಅನುಭವಿಸುವ ಮೂಲಕ ಸಂಸ್ಕೃತಿ, ಸಂಸ್ಕಾರವನ್ನು ಪಡೆದುಕೊಂಡು ಬುದ್ಧಿವಂತರಾಗಬೇಕು. ಪ್ರಪಂಚವನ್ನು ಸರಿಯಾಗಿ ಅರಿತು ನಡೆಯಬೇಕು ಎಂದು ಕಿವಿ ಮಾತು ಹೇಳಿದರು.

ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಆತ್ಮಬಲ, ಆತ್ಮಸ್ಥೈರ್ಯ, ಆತ್ಮವಿಶ್ವಾಸ ಅತಿ ಮುಖ್ಯ. ಅವುಗಳನ್ನು ಹೊಂದಿದವರು ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸುತ್ತಾರೆ ಎಂದು ತಿಳಿ ಹೇಳಿದರು.

ವಿದ್ಯಾರ್ಥಿಗಳಿಗೆ ಬೇಕಿರುವುದು ಕೇವಲ ಅಂಕಗಳಲ್ಲ ಅವರಿಗೆ ಅಗತ್ಯವಿರುವುದು ಆತ್ಮ ಬಲ, ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಅವುಗಳನ್ನು ಕಳೆದುಕೊಂಡವರು ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮೊದಲು ಆ ಮೂರನ್ನು ಗಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೆದರಿ ಅಧೀರರಾಗಬಾರದು. ಸರಿಯಾದ ಪೂರ್ವ ತಯಾರಿಯೊಂದಿಗೆ ಅದನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವ ಹಾಗೆ ಪರೀಕ್ಷೆ ಸಮಯದಲ್ಲಿ ಪರದಾಡುವ ಬದಲು ಅಂದಿನ ಪಾಠವನ್ನು ಅಂದೇ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಈ.ಸುರೇಂದ್ರ, ವಿದ್ಯಾರ್ಥಿಗಳಲ್ಲಿ ಧೈರ್ಯತುಂಬಿ ದ್ವಿತೀಯ ಪಿಯುಸಿ ಪರೀಕ್ಷೆ ಗಳಿಗೆ ಅವರನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಣಿಪಾಲದ ಶೈಕ್ಷಣಿಕ ತರಬೇತುದಾರ ಮೇಜರ್, ಪ್ರೊ.ಎಮ್ ರಾಧಾಕೃಷ್ಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಬಗೆ ಮತ್ತು ಪೂರ್ವ ತಯಾರಿ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದ ನಡುವೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶೃಂಗೇರಿ, ಮೂಡಿಗೆರೆ, ಜಯಪುರ, ಕಡೂರು ಮತ್ತು ಬಾಳೆಹೊನ್ನೂರು ಬಿಜಿಎಸ್ ಕಾಲೇಜುಗಳ ಪ್ರಾಂಶುಪಾಲರಾದ ಡಾ. ಕೆ.ಸಿ.ನಾಗೇಶ್,ಡಾ. ವೈ.ಸುರೇಶ್, ಮುರಳಿಧರ್,ಅಜ್ಜಯ್ಯ, ಸಂದೇಶ್, ಉಪನ್ಯಾಸಕರಾದ ಅಲ್ ಜಸೀನ ಹಮೀದ್, ರಮ್ಯಶ್ರೀ ಉಪಸ್ಥಿತರಿದ್ದರು.