ನವದೆಹಲಿ/ಬೆಂಗಳೂರು: ಮಳೆ ಕೊರತೆ ಹಾಗೂ ಬರದಿಂದ ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಂಬಂತೆ ತಮಿಳುನಾಡಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಲಾ 2.5 ಟಿಎಂಸಿ (ಒಟ್ಟೂ 5 ಟಿಎಂಸಿ) ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ.
ದೆಹಲಿಯಲ್ಲಿ ನಿನ್ನೆ ಸಮಿತಿಯ ಸಭೆ ನಡೆಯಿತು. 7.61 ಟಿಎಂಸಿ ಬಾಕಿ ಜೊತೆಗೆ, ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, 2023ರ ಜೂನ್ 1ರಿಂದ 2024ರ ಫೆಬ್ರವರಿ 9ರವರೆಗೆ ಕರ್ನಾಟಕದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ 52.43%ರಷ್ಟು ಒಳಹರಿವಿನ ಕೊರತೆಯಿದೆ. ಜೊತೆಗೆ, ರಾಜ್ಯದಲ್ಲಿ ತೀವ್ರ ಬರವಿದೆ. ಹೀಗಾಗಿ, ನೀರು ಬಿಡುಗಡೆ ಸಾಧ್ಯವಿಲ್ಲ. ಸಂಕಷ್ಟ ಸೂತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಸಮಿತಿ, ನ್ಯಾಯಾಧೀಕರಣದ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತಮಿಳುನಾಡಿಗೆ ತಲಾ 2.5 (ಒಟ್ಟೂ 5)ಟಿಎಂಸಿ ನೀರು ಹರಿಸಲು ಶಿಫಾರಸ್ಸು ಮಾಡಿತು. ಸಮಿತಿಯ ಈ ಶಿಫಾರಸ್ಸನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ನಿರ್ಧರಿಸಿದೆ.










